ಡೈಲಿ ವಾರ್ತೆ: ಫೆ./02/2026

ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಾಲಕ ಬಲಿ: ತೆರೆದ ಸಂಪ್‌ನಲ್ಲಿ 14 ವರ್ಷದ ಪ್ರೀತಮ್ ಶವ ಪತ್ತೆ

ಬೆಂಗಳೂರು: ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಬಾಲಕನೊಬ್ಬ ಜಲಮಂಡಳಿ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದ ಸ್ಥಳದ ತೆರೆದ ಸಂಪ್‌ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ತಾತಗುಣಿ ಸಮೀಪ ಭಾನುವಾರ ನಡೆದಿದೆ.

ಮೃತ ಬಾಲಕನನ್ನು ಚಾಮರಾಜನಗರ ಜಿಲ್ಲೆಯ ರಜನಿಕಾಂತ್ ಎಂಬುವವರ ಪುತ್ರ ಪ್ರೀತಮ್ (14) ಎಂದು ಗುರುತಿಸಲಾಗಿದೆ.

ರಜನಿಕಾಂತ್ ಕುಟುಂಬವು ತಾತಗುಣಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಪ್ರೀತಮ್ ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದನು. ಈ ಕುರಿತು ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಪೊಲೀಸರು ಹಾಗೂ ಸ್ಥಳೀಯರ ಸಹಕಾರದಿಂದ ಶೋಧ ಕಾರ್ಯ ನಡೆಯುತ್ತಿದ್ದ ವೇಳೆ, ಜಲಮಂಡಳಿ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದ ಪ್ರದೇಶದ ತೆರೆದ ಸಂಪ್/ಚೇಂಬರ್‌ನಲ್ಲಿ ಬಾಲಕನ ಶವ ಪತ್ತೆಯಾಯಿತು.

ಮೃತದೇಹವನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿತು. ಪ್ರಾಥಮಿಕ ತನಿಖೆಯಲ್ಲಿ, ಕಳೆದ ಹಲವು ದಿನಗಳಿಂದ ಜಲಮಂಡಳಿ ಸಂಪ್ ಅನ್ನು ಮುಚ್ಚದೇ ನಿರ್ಲಕ್ಷ್ಯ ವಹಿಸಿರುವುದು ಈ ದುರ್ಘಟನೆಗೆ ಕಾರಣವೆಂದು ಶಂಕಿಸಲಾಗಿದೆ.

ಬಾಲಕ ಓಡಾಡುವ ವೇಳೆ ಸಂಪ್‌ಗೆ ಬಿದ್ದು ಸಾವನ್ನಪ್ಪಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಗ್ಗಲೀಪುರ ಪೊಲೀಸರು ಮೃತದೇಹವನ್ನು ಸಂಪ್‌ನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಜಲಮಂಡಳಿಯ ನಿರ್ಲಕ್ಷ್ಯದ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.