
ಡೈಲಿ ವಾರ್ತೆ: ಫೆ./02/2026
ಉಡುಪಿ| ಆಪ್ತನ ಮೇಲೆ ತಲವಾರು ದಾಳಿ ನಡೆದರೂ ಮೌನ: ಪ್ರಸಾದ್ ರಾಜ್ ಕಾಂಚನ್ ನಡೆಗೆ ಬಿಜೆಪಿ ಅನುಮಾನ

ಉಡುಪಿ: ನಗರದ ಹೃದಯಭಾಗದಲ್ಲಿ ರಾತ್ರಿ ವೇಳೆ ಕಾಂಗ್ರೆಸ್ ಪಕ್ಷದ ಕೆಲ ಕಾರ್ಯಕರ್ತರು ಪಾನಮತ್ತ ಸ್ಥಿತಿಯಲ್ಲಿ ಬೀದಿ ಗಲಾಟೆಯಲ್ಲಿ ತೊಡಗಿಕೊಂಡು, ಕಾಂಗ್ರೆಸ್ ಮುಖಂಡ ಪ್ರಸಾದ್ ಕಾಂಚನ್ ಅವರ ಆಪ್ತನ ಮೇಲೆ ತಲವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಉಡುಪಿಯ ಜನತೆಯಲ್ಲಿ ಭಯ ಹಾಗೂ ಆತಂಕಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಪ್ರಕರಣದ ಎಲ್ಲ ಆರೋಪಿಗಳ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ನಗರ ಬಿಜೆಪಿ ಆಗ್ರಹಿಸಿದೆ.
ಬಾರ್ ಒಂದರಲ್ಲಿ ಆರಂಭವಾದ ಗಲಾಟೆಯ ಮುಂದುವರಿದ ಭಾಗವಾಗಿ ಉಡುಪಿ ಮೀನು ಮಾರುಕಟ್ಟೆ ಬಳಿ ತಲವಾರು ಬಳಸಿ ಹೊಡೆದಾಡುವ ಮಟ್ಟಕ್ಕೆ ಘಟನೆ ತಲುಪಿರುವುದು ಗಂಭೀರ ವಿಷಯವಾಗಿದ್ದು, ಶಾಂತ ನಗರ ಎಂಬ ಉಡುಪಿಯ ಹೆಸರಿಗೆ ಧಕ್ಕೆ ತಂದಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಇಂತಹ ಘಟನೆಗಳನ್ನು ಪ್ರಜ್ಞಾವಂತ ನಾಗರಿಕರು ಸಹಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದಿನಂಪ್ರತಿ ಬಿಜೆಪಿ ವಿರುದ್ಧ ತೀವ್ರ ಭಾಷಣ ಮಾಡುವ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಅವರು, ತಮ್ಮದೇ ಆಪ್ತನ ಮೇಲೆ ತಮ್ಮದೇ ಪಕ್ಷದ ಕಾರ್ಯಕರ್ತರಿಂದ ಹಲ್ಲೆ ನಡೆದರೂ ಈವರೆಗೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ತಮ್ಮದೇ ಪಕ್ಷದ ಸರ್ಕಾರ ಆಡಳಿತದಲ್ಲಿರುವ ಸಂದರ್ಭದಲ್ಲಿಯೂ ಕಾರ್ಯಕರ್ತರು ಬೀದಿ ಕಾಳಗ ನಡೆಸುತ್ತಿರುವ ಬಗ್ಗೆ ಯಾವುದೇ ಕಾಂಗ್ರೆಸ್ ನಾಯಕರು ಸ್ಪಷ್ಟ ನಿಲುವು ಪ್ರಕಟಿಸದಿರುವುದು ದುರದೃಷ್ಟಕರ ಎಂದು ಹೇಳಲಾಗಿದೆ.
ಕಳೆದ ವರ್ಷ ಉಡುಪಿಯ ಕಾಂಗ್ರೆಸ್ ಕಚೇರಿಯಲ್ಲಿಯೇ ಯುವ ಕಾಂಗ್ರೆಸ್ ಕಾರ್ಯಕರ್ತರು ಹೊಡೆದಾಡಿಕೊಂಡ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಸಂದರ್ಭದಲ್ಲಿಯೂ ಸಾರ್ವಜನಿಕ ಆಕ್ರೋಶ ವ್ಯಕ್ತವಾದರೂ ಸೂಕ್ತ ಕ್ರಮ ಕೈಗೊಳ್ಳದ ಪರಿಣಾಮ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದು ಬಿಜೆಪಿ ಟೀಕಿಸಿದೆ.
ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವಂತಹ ಈ ಕಿಡಿಗೇಡಿ ಚಟುವಟಿಕೆಗಳಿಗೆ ಪೊಲೀಸ್ ಇಲಾಖೆ ತಕ್ಷಣ ಕಡಿವಾಣ ಹಾಕಿ, ಸಮಾಜದ ಶಾಂತಿ ಕದಡುವವರ ವಿರುದ್ಧ ಕಟ್ಟುನಿಟ್ಟಾದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್ ಹಾಗೂ ಪಕ್ಷದ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.