
ಡೈಲಿ ವಾರ್ತೆ: ಫೆ./02/2026
ಕೋಟ ರಥೋತ್ಸವದ ಸಂಭ್ರಮದೊಂದಿಗೆ ಸ್ವಚ್ಛತಾ ಸಂದೇಶ: ಎನ್‌ಎಚ್ – 66ರಲ್ಲಿ ಪಂಚವರ್ಣ ಯುವಕ, ಮಹಿಳಾ ಮಂಡಲದ ಮಾದರಿ ಕಾರ್ಯ

ಕೋಟ: ಇಲ್ಲಿನ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವ ಭಕ್ತಿಭಾವ ಹಾಗೂ ಸಂಭ್ರಮದೊಂದಿಗೆ ನಡೆಯಿತು.

ರಥವು ಕೋಟ ರಾಷ್ಟ್ರೀಯ ಹೆದ್ದಾರಿ 66 ಮೂಲಕ ಸಂಚರಿಸಿ ಅಮೃತೇಶ್ವರೀ ದೇಗುಲವನ್ನು ಸಮೀಪಿಸಿ ಪುನಃ ದೇಗುಲಕ್ಕೆ ಮರಳಿತು. ರಥೋತ್ಸವದ ಸಂದರ್ಭದಲ್ಲೇ ಸಮಾಜಮುಖಿ ಚಿಂತನೆಯೊಂದಿಗೆ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಪಂಚವರ್ಣ ಮಹಿಳಾ ಮಂಡಲದ ಪದಾಧಿಕಾರಿಗಳು ಹಾಗೂ ಸದಸ್ಯರು ಹೆದ್ದಾರಿ ಉದ್ದಕ್ಕೂ ಸ್ವಚ್ಛತಾ ಕಾರ್ಯ ನಡೆಸಿದರು. ದಾರಿ ಬದಿಯಲ್ಲಿ ಬಿದ್ದಿದ್ದ ಕುಡಿಯುವ ನೀರಿನ ಬಾಟಲಿ ಹಾಗೂ ಮಜ್ಜಿಗೆ ಪ್ಲಾಸ್ಟಿಕ್ ತೊಟ್ಟೆಗಳನ್ನು ಸಂಗ್ರಹಿಸಿ ಸ್ವಚ್ಛತೆ ಕಾಪಾಡುವ ಸಂದೇಶ ನೀಡಿದರು.
ಈ ಸ್ವಚ್ಛತಾ ಅಭಿಯಾನಕ್ಕೆ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಟ್ರಸ್ಟಿ ಕೆ. ಅನಂತಪದ್ಮನಾಭ ಐತಾಳ್, ಕೋಟ ಹಿರೇಮಹಾಲಿಂಗೇಶ್ವರ ದೇಗುಲದ ಮಾಜಿ ಟ್ರಸ್ಟಿ ಜಡ್ಡಾಡಿ ವಿಜಯಕುಮಾರ್ ಶೆಟ್ಟಿ ಹಾಗೂ ಉದ್ಯಮಿ ಸೀತಾರಾಮ ಆಚಾರ್ ಅವರು ಚಾಲನೆ ನೀಡಿ ಸಹಕಾರ ನೀಡಿದರು.

ಹೆದ್ದಾರಿ ಉದ್ದಕ್ಕೂ ಶಿಸ್ತಿನಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಪಂಚವರ್ಣದ ಪದಾಧಿಕಾರಿಗಳನ್ನು ಕೋಟ ಆರಕ್ಷಕ ಠಾಣಾಧಿಕಾರಿ ಪ್ರವೀಣ್ ಕುಮಾರ್ ಆರ್ ಅವರು ಶ್ಲಾಘಿಸಿ, ತಂಡದ ಸದಸ್ಯರನ್ನು ಕೈ ಕುಲುಕಿ ಅಭಿನಂದಿಸಿದರು. ಇದೇ ವೇಳೆ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಭಾಕರ್ ದೇವಾಡಿಗ ಅವರು ತಂಡದೊಂದಿಗೆ ಸಾಥ್ ನೀಡಿದರು.

ಈ ಸ್ವಚ್ಛತಾ ಕಾರ್ಯದಲ್ಲಿ ಮಣಿಪಾಲದ ಎಂ.ಐ.ಟಿ.ಯ ಸಹಾಯಕ ಪ್ರಾಧ್ಯಾಪಕ ವಿಜೇಂದ್ರ ಪ್ರಭು ಹಾಗೂ ಗಾಯತ್ರಿ ಕಾಮತ್ ದಂಪತಿಗಳು ಪಾಲ್ಗೊಂಡು ಸಮಾಜಕ್ಕೆ ಮಾದರಿಯಾದರು.
ಕಾರ್ಯಕ್ರಮದಲ್ಲಿ ಪಂಚವರ್ಣ ಯುವಕ ಮಂಡಲದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್, ಗಿರೀಶ್ ಆಚಾರ್, ಉಪಾಧ್ಯಕ್ಷ ಸಂತೋಷ್ ಪೂಜಾರಿ, ಕಾರ್ಯಾಧ್ಯಕ್ಷ ಶಶಿಧರ ತಿಂಗಳಾಯ, ಸದಸ್ಯರಾದ ಮಹೇಶ್ ಬೆಳಗಾವಿ, ಕೃಷ್ಣ ಕಾಂಚನ್, ರವೀಂದ್ರ ಕೋಟ, ಅಭಿಷೇಕ್ ಕಾಸನಗುಂದು, ಸಿದ್ಧಾರ್ಥ ಸೇರಿದಂತೆ ಹಲವರು ಭಾಗವಹಿಸಿದರು.
ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್, ವಿಶಾಲ ಹಾಗೂ ಅರ್ಚಕ ಯುವ ಸಂಘಟನೆಯ ಸದಸ್ಯರು ಸಹ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು.
ರಥೋತ್ಸವದೊಂದಿಗೆ ಸ್ವಚ್ಛತಾ ಕಾರ್ಯವನ್ನು ಜೋಡಿಸಿದ ಪಂಚವರ್ಣ ಸಂಘಟನೆಯ ಈ ಸಮಾಜಮುಖಿ ಪ್ರಯತ್ನ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಯಿತು.