ಡೈಲಿ ವಾರ್ತೆ:30/DEC/2024

ಉಳ್ಳಾಲ: ಸಹೋದರನ ಪುತ್ರಿಯ ರಕ್ಷಣೆಗೆ ಹೋದ ವ್ಯಕ್ತಿ ಸಮುದ್ರದ ಅಲೆಗೆ ಸಿಲುಕಿ ಮೃತ್ಯು!

ಉಳ್ಳಾಲ: ಸಹೋದರನ ಪುತ್ರಿಯನ್ನು ಸಮುದ್ರದ ನೀರಿನಿಂದ ರಕ್ಷಿಸಲು ತೆರಳಿದ ಬೆಂಗಳೂರು ನಿವಾಸಿ ಸಮುದ್ರದ ಅಲೆಗಳ ನಡುವೆ ಸಿಲುಕಿ ಮೃತಪಟ್ಟ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ರವಿವಾರ ಸಂಭವಿಸಿದೆ.

ಬೆಂಗಳೂರು ಶಿವಾಜಿನಗರದ ಎಚ್.ಪಿ.ಕೆ ರೋಡ್ ನಿವಾಸಿ ದಿ.ಖಝೂಮ್ ಅಬ್ದುಲ್ ಶೈಖ್ ಎಂಬವರ ಪುತ್ರ ಕೆ.ಎಮ್. ಸಜ್ಜದ್ ಆಲಿ (45) ಮೃತರು.

ಹಿರಿಯ ಸಹೋದರನ ಪುತ್ರಿ ಸಮುದ್ರದಲ್ಲಿ ಆಟವಾಡುತ್ತಿದ್ದ ಸಂದರ್ಭ ಅಲೆಗಳ ನಡುವೆ ಸಿಲುಕಿದ್ದನ್ನು ಸಾಜಿದ್ ಆಲಿ ರಕ್ಷಿಸಿ, ತಾವೇ ಖುದ್ದು ಅಲೆಗಳ ನಡುವೆ ಸಿಲುಕಿ ಘಟನೆ ಸಂಭವಿಸಿದೆ.
ನೀರಿನಲ್ಲಿ ಮುಳುಗಿ ವಾಪಸ್‌ ದಡಕ್ಕೆ ಬಂದವರನ್ನು ತಕ್ಷಣ ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯುವ ಪ್ರಯತ್ನ ಮಾಡಲಾಯಿತಾದರೂ, ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದವರು, ಪಡೀಲ್ ನಲ್ಲಿ ನಡೆದಿದ್ದ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗವಹಿಸಿ 11 ಮಂದಿ ಕುಟುಂಬಿಕರು ಸೋಮೇಶ್ವರ ಸಮುದ್ರ ತೀರದಲ್ಲಿ ವಿಹಾರಕ್ಕೆಂದು ಆಗಮಿಸಿದ್ದರು. 2015ರಲ್ಲಿ ಪುತ್ತೂರು ನಿವಾಸಿ ಆಲಿಮಾ ರಶೀದಾ ಎಂಬವರನ್ನು ವಿವಾಹವಾಗಿದ್ದರು. ಬೆಂಗಳೂರಿನಲ್ಲೆ ನೆಲೆಸಿದ್ದ ಕುಟುಂಬ ಕಳೆದ ನಾಲ್ಕು ವರ್ಷಗಳಿಂದ ಪುತ್ತೂರಿನ ಬನ್ನೂರು ಬಾಡಿಗೆ ಫ್ಲ್ಯಾಟ್ ನಲ್ಲಿ ನೆಲೆಸಿದ್ದರು.
ಸಜ್ಜದ್ ಆಲಿ ವಾರಕ್ಕೊಮ್ಮೆ ಊರಿಗೆ ಬರುತ್ತಿದ್ದರು. ಡಿ.29 ರಂದು ಸಜ್ಜದ್ ಆಲಿ ಪುತ್ತೂರಿಗೆ ಸಹೋದರರು ಹಾಗೂ ಕುಟುಂಬಿಕರ ಜತೆಗೆ ಮದುವೆ ಸಮಾರಂಭಕ್ಕೆಂದು ಬಂದಿದ್ದರು. ಮೃತರು ತಾಯಿ ಸಾಜಿದಾ ಬೇಗಂ, ಪತ್ನಿ ಹಾಗೂ ಮಕ್ಕಳಾದ ಕೈರಾ ಫೈಜಾ, ಹಮ್ಜಾನ್ ಆಲಿ, ಹುಸೈನ್ ಆಲಿ ಅವರನ್ನು ಅಗಲಿದ್ದಾರೆ.