ಡೈಲಿ ವಾರ್ತೆ: 01/JAN/2025
ನ್ಯೂ ಇಯರ್ ‘ಕಿಕ್’| ಅಬಕಾರಿ ಇಲಾಖೆಗೆ ಭರ್ಜರಿ ಆದಾಯ: ಅರ್ಧ ದಿನದಲ್ಲೇ 308 ಕೋಟಿ ರೂ. ಮದ್ಯ ಮಾರಾಟ
ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಗೆ ನೂರಾರು ಕೋಟಿ ರುಪಾಯಿ ಆದಾಯ ಹರಿದು ಬಂದಿದೆ.
ಡಿಸೆಂಬರ್ 31 ರ ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅರ್ಧ ದಿನದ ಅವಧಿಯಲ್ಲಿ ಕೆಎಸ್ಬಿಸಿಎಲ್ನಿಂದ ಬರೋಬ್ಬರಿ 308 ಕೋಟಿ ರುಪಾಯಿ ಮದ್ಯ ಮಾರಾಟವಾಗಿದೆ. ಅಬಕಾರಿ ಇಲಾಖೆಯ ನಿರೀಕ್ಷೆಗೂ ಮೀರಿ ಮಾರಾಟವಾಗಿದೆ.
ಅಬಕಾರಿ ಇಲಾಖೆ 250 ಕೋಟಿ ರೂ. ಮೌಲ್ಯದ ಮದ್ಯ ಮಾರಾಟದ ಗುರಿ ಇಟ್ಟುಕೊಂಡಿತ್ತು. ಆದರೆ, ಅದನ್ನೂ ಮೀರಿ ಮಾರಾಟವಾಗಿದೆ. ಕಳೆದ ವರ್ಷ 2023 ರ ಡಿಸೆಂಬರ್ 31 ರಂದು 193 ಕೋಟಿ ರುಪಾಯಿ ಮದ್ಯ ಮಾರಾಟ ಆಗಿತ್ತು. 2024 ಡಿಸೆಂಬರ್ 31 ರಂದು 7,305 ಮದ್ಯ ಮಾರಾಟಗಾರರು ಕೆಎಸ್ಬಿಸಿಎಲ್ನಿಂದ ಮದ್ಯ ಖರೀದಿ ಮಾಡಿದ್ದಾರೆ.
ಐಎಂಎಲ್ 4,83,715 ಲಕ್ಷ ಬಾಕ್ಸ್ ಮಾರಾಟದಿಂದ 250.25 ಕೋಟಿ ಆದಾಯ ಸಂಗ್ರಹವಾಗಿದೆ. ಬಿಯರ್- 2,92,339 ಲಕ್ಷ ಬಾಕ್ಸ್ ಮಾರಾಟದಿಂದ 57,75 ಕೋಟಿ ಆದಾಯ ಸಂಗ್ರಹವಾಗಿದೆ. ಒಟ್ಟು 7,76,042 ಲಕ್ಷ ಬಾಕ್ಸ್ ಮದ್ಯ ಮಾರಾಟದಿಂದ ಒಟ್ಟು 308 ಕೋಟಿ ರುಪಾಯಿ ಆದಾಯ ಸಂಗ್ರಹವಾಗಿದೆ.