
ಡೈಲಿ ವಾರ್ತೆ: ಫೆ./01/2026
ಭಕ್ತಿಸಾಗರದಲ್ಲಿ ತೇಲಿದ ಕೋಟದ ಹಿರೇಮಹಾಲಿಂಗೇಶ್ವರ ದೇಗುಲದ ವೈಭವಯುತ ರಥೋತ್ಸವ

ಕೋಟ: ಕೋಟದ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇಗುಲದ ವಾರ್ಷಿಕ ರಥೋತ್ಸವ ಭಾನುವಾರ ಅಪಾರ ಭಕ್ತಿಭಾವ, ಸಂಭ್ರಮ ಹಾಗೂ ವೈಭವದೊಂದಿಗೆ ವಿಜೃಂಭಣೆಯಿಂದ ನೆರವೇರಿತು.

ಬೆಳಿಗ್ಗೆ ದೇಗುಲದಲ್ಲಿ ವೈದಿಕ ಮಂತ್ರೋಚ್ಚಾರಣೆಯೊಂದಿಗೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.
ಪೂರ್ವಾಹ್ನ ರಥಾವರೋಹಣ ಕಾರ್ಯಕ್ರಮ ಭಕ್ತರ ಜಯಘೋಷಗಳ ನಡುವೆ ನಡೆಯಿತು.
ದೇಗುಲದಲ್ಲಿ ನೂರಾರು ಭಕ್ತರು ಹಣ್ಣು–ಕಾಯಿ ಸೇರಿದಂತೆ ವಿವಿಧ ವಿಶೇಷ ಪೂಜೆಗಳನ್ನು ಸಲ್ಲಿಸಿ ದೇವರ ಆಶೀರ್ವಾದ ಪಡೆದುಕೊಂಡರು.
ಮಧ್ಯಾಹ್ನ ದೇಗುಲದ ವತಿಯಿಂದ ಆಯೋಜಿಸಲಾದ ಮಹಾ ಅನ್ನಸಂತರ್ಪಣೆಯಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿ ಭಕ್ತಿಭಾವಕ್ಕೆ ತೊಡಗಿದರು.

ಸಂಜೆಯ ವೇಳೆಗೆ ರಾಷ್ಟ್ರೀಯ ಹೆದ್ದಾರಿಯ ಮೂಲಕ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ ಅದ್ದೂರಿಯಾಗಿ ನಡೆದ ರಥೋತ್ಸವ ಮೆರವಣಿಗೆ ಭಕ್ತರ ಗಮನ ಸೆಳೆಯಿತು.

ಅಮೃತೇಶ್ವರಿ ದೇಗುಲದ ಸಮೀಪ ತೆರಳಿ ಪುನಃ ಹಿರೇಮಹಾಲಿಂಗೇಶ್ವರ ದೇಗುಲವನ್ನು ತಲುಪಿದ ರಥೋತ್ಸವದ ದರ್ಶನಕ್ಕೆ ಭಕ್ತರು ಹರಿದು ಬಂದರು.
ಮೆರವಣಿಗೆಯಲ್ಲಿ ಕೀಲುಕುದುರೆ ನೃತ್ಯ, ಡೋಳ್ಳು ಕುಣಿತ, ವೈವಿಧ್ಯಮಯ ಗೊಂಬೆ ಪ್ರದರ್ಶನ, ವಾದ್ಯ ಚಂಡೆ ಘೋಷ, ವಯಲಿನ್ ವಾದನ ಹಾಗೂ ಪುಟಾಣಿ ಭಜಕರ ಭಜನೆಗಳು ಮೇಳೈಸಿ ರಥೋತ್ಸವಕ್ಕೆ ವಿಶೇಷ ಮೆರುಗು ನೀಡಿದವು. ಇಡೀ ಕೋಟ ಪ್ರದೇಶ ಭಕ್ತಿರಸದ ಮಹೋತ್ಸವದಂತೆ ಕಂಗೊಳಿಸಿತು.
ಈ ಸಂದರ್ಭದಲ್ಲಿ ದೇಗುಲದ ಅಧ್ಯಕ್ಷ ಕೆ. ಅನಂತಪದ್ಮನಾಭ ಐತಾಳ್, ಸದಸ್ಯರಾದ ಶ್ರೀನಿವಾಸ್ ಅಡಿಗ, ಭಾಸ್ಕರ್ ಶೆಟ್ಟಿ, ಉಮೇಶ್ ಪೂಜಾರಿ, ದಿನೇಶ್ ದೇವಾಡಿಗ, ಶ್ರೀಲಕ್ಷ್ಮೀ ಪ್ರಭು, ಅರ್ಚಕರಾದ ಗಣೇಶ್ ಭಟ್, ರಾಜೇಂದ್ರ ಅಡಿಗ, ಸದಾಶಿವ ಅಡಿಗ, ಅಮೃತೇಶ್ವರಿ ದೇಗುಲದ ಅಧ್ಯಕ್ಷ ಆನಂದ್ ಸಿ. ಕುಂದರ್, ಮಿತ್ರವೃಂದದ ಆನಂದ್ ದೇವಾಡಿಗ ಸೇರಿದಂತೆ ಅನೇಕ ಗಣ್ಯರು, ಭಕ್ತರು ಹಾಗೂ ಸಾರ್ವಜನಿಕರು ಭಾಗಿಯಾಗಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.