ಡೈಲಿ ವಾರ್ತೆ: 01/JAN/2025

ಉದಯೋನ್ಮುಖ ಯಕ್ಷಗಾನ ಕಲಾವಿದ, ಎಂಎಸ್‌ಡಬ್ಲ್ಯು ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವು

ಮಂಗಳೂರು| ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಬಿದ್ದು ಅವರು ಹಿಂದಿನಿಂದ ಬರುತಿದ್ದ ವಾಹನ ತಲೆಯ ಮೇಲೆ ಹರಿದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಡಿ. 31 ರಂದು ಮಂಗಳವಾರ ಅರ್ಕುಳದಲ್ಲಿ ನಡೆದಿದೆ.

ಮೃತ ಬೈಕ್ ಸವಾರ ಉದಯೋನ್ಮುಖ ಯಕ್ಷಗಾನ ಕಲಾವಿದ, ಎಂಎಸ್‌ಡಬ್ಲ್ಯು ವಿದ್ಯಾರ್ಥಿ ಪ್ರವಿತ್ ಆಚಾರ್ಯ(21) ಎಂದು ಗುರುತಿಸಲಾಗಿದೆ.

ಪ್ರವಿತ್ ಮೂಲತಃ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಸಮೀಪದ ಮೇಲಂತಬೆಟ್ಟು ಮುಂಡೂರು ನಿವಾಸಿ ಶೇಖರ ಆಚಾರ್ಯರ ಪುತ್ರನಾದ ಪ್ರವಿತ್ ಆಚಾರ್ಯ ಬಂಟ್ವಾಳ ತಾಲೂಕಿನ ವಿಟ್ಲದ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಎಸ್‌ಡಬ್ಲ್ಯು ವಿದ್ಯಾರ್ಥಿಯಾಗಿದ್ದಾರೆ.

ಕಾಲೇಜು ವ್ಯಾಸಂಗದ ಉದ್ದೇಶದಿಂದ ಮಂಗಳೂರು ಸಮೀಪ ತನ್ನ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯವಿದ್ದರು. ಪ್ರವಿತ್ ಆಚಾರ್ಯ ಪಡೀಲ್ ಅಥವಾ ಬಿ.ಸಿ. ರೋಡ್‌ನಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿ ವಿಟ್ಲಕ್ಕೆ ಕಾಲೇಜಿಗೆ ಹೋಗುತ್ತಿದ್ದರು.

ಎಂದಿನಂತೆ ಮಂಗಳವಾರ ಪ್ರವಿತ್ ಸಂಜೆ ಕಾಲೇಜು ಮುಗಿಸಿ ಬಿ.ಸಿ‌. ರೋಡ್‌ನಲ್ಲಿದ್ದ ಬೈಕ್ ಹತ್ತಿ ಮಂಗಳೂರಿನತ್ತ ಬರುತ್ತಿದ್ದರು. ಅರ್ಕುಳಕ್ಕೆ ಬರುತ್ತಿದ್ದಂತೆ ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಅವರು ರಸ್ತೆಗೆಸೆಯಲ್ಪಟ್ಟಿದ್ದಾರೆ. ಈ ವೇಳೆ ಹಿಂಭಾಗದಿಂದ ಬರುತ್ತಿದ್ದ ಐಸ್‌ಕ್ರೀಂ ಸಾಗಾಟದ ವಾಹನ ಪ್ರವಿತ್ ತಲೆಯ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಹವ್ಯಾಸಿ ಯಕ್ಷಗಾನ ಕಲಾವಿದನಾಗಿರುವ ಪ್ರವಿತ್ ಆಚಾರ್ಯ, ಸಸಿಹಿತ್ಲು ಯಕ್ಷಗಾನ ಮೇಳದಲ್ಲಿ ಸ್ತ್ರೀವೇಷಧಾರಿಯಾಗಿಯೂ ಯಕ್ಷಗಾನ ಕಲಾಸಕ್ತರ ಗಮನ ಸೆಳೆಯುತ್ತಿದ್ದರು.