ಡೈಲಿ ವಾರ್ತೆ: 01/JAN/2025

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ: ಪವಾಡ ಸದೃಶ ರೀತಿಯಲ್ಲಿ ಬದುಕುಳಿದ 12 ವರ್ಷದ ಬಾಲಕ ವಿನಾಯಕ್ ಬಾರಕೇರ

ಹುಬ್ಬಳ್ಳಿ| ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸ್ಪೋಟ ದುರ್ಘಟನೆಯಲ್ಲಿ ಈವರೆಗೆ 8 ಜನ ಅಯ್ಯಪ್ಪ ಮಾಲಾಧಾರಿಗಳು ಮೃತಪಟ್ಟಿದ್ದು, ಒಬ್ಬ ಮಾಲಾಧಾರಿ ಮಾತ್ರ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ.

ಮಾಲಾಧಾರಿ 12 ವರ್ಷದ ಬಾಲಕ ವಿನಾಯಕ್ ಬಾರಕೇರ ಬಹುತೇಕ ಚೇತರಿಸಿಕೊಂಡಿದ್ದು, ಇಂದು ಅಥವಾ ನಾಳೆ ಆಸ್ಪತ್ರೆಯಿಂದ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ತಿಳಿದು ಬಂದಿದೆ.

ಡಿಸೆಂಬರ್ 22 ರಂದು ಹುಬ್ಬಳ್ಳಿಯ ಅಚ್ಚವ್ವನ ಕಾಲೋನಿಯಯಲ್ಲಿ ಸಿಲಿಂಡರ್ ಸ್ಪೋಟವಾಗಿತ್ತು. ಘಟನೆಯಲ್ಲಿ 9 ಜನ ಮಾಲಾಧಾರಿಗಳು ಗಂಭೀರ ಗಾಯಗೊಂಡಿದ್ದರು. 9 ಜನರ ಪೈಕಿ ನಿಜಲಿಂಗಪ್ಪ ಬೇಪುರಿ, ಸಂಜಯ್ ಸವದತ್ತಿ, ಲಿಂಗರಾಜ ಬೀರನೂರ, ಮಂಜು ವಾಗ್ಮೋಡೆ, ರಾಜು ಮೂಗೇರಿ, ತೇಜಸ್ವರ್ ಸುತಾರೆ, ಶಂಕರ್ ಊರ್ಬಿ, ಪ್ರಕಾಶ್ ಬಾರಕೇರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

12 ವರ್ಷ ವಯಸ್ಸಿನ ವಿನಾಯಕ್ ಬಾರಕೇರ ಮಾತ್ರ ಗುಣಮುಖನಾಗಿದ್ದು, ಈತನ ತಂದೆ ಪ್ರಕಾಶ್ ಬಾರಕೇರ ಮಂಗಳವಾರ ನಸುಕಿನಲ್ಲಿ ಕೊನೆಯುಸಿರೆಳೆದಿದ್ದರು. ವಿನಾಯಕ್​ಗೆ ಶೇಕಡಾ 25 ರಷ್ಟು ಸುಟ್ಟ ಗಾಯಗಳಾಗಿದ್ದವು.

ಸಿಲಿಂಡರ್ ಸ್ಫೋಟ ಸಂಭವಿಸಿದಾಗ ಮೊದಲು ಮಗನನ್ನು ಕರೆದುಕೊಂಡು ಹೊರಗೇ ಬಂದಿದ್ದೇ ಪ್ರಕಾಶ್ ಬಾರಕೇರ ಆಗಿದ್ದರು. ಸುಟ್ಡ ಗಾಯಗಳಿಂದ ನರಳಾಡುತ್ತಿದ್ದರೂ ಮಗನನ್ನು ಕಾಪಾಡಲು ಓಡೋಡಿ ಬಂದಿದ್ದರು.