ಡೈಲಿ ವಾರ್ತೆ: 02/JAN/2025

ಬೆಂಗಳೂರು: ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ, 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಬೆಂಕಿಗಾಹುತಿ

ಬೆಂಗಳೂರು: ಇಲ್ಲಿನ ಮಹದೇವಪುರ ಬಳಿಯ ಬೈಕ್ ಶೋರೂಂವೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ ಐವತ್ತು ದ್ವಿಚಕ್ರ ವಾಹನಗಳು ಸುಟ್ಟು ಭಸ್ಮವಾಗಿವೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ನಿನ್ನೆ ರಾತ್ರಿ ಈ ಅವಘಡ ಸಂಭವಿಸಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬೈಕ್‌ಗಳು ಸುಟ್ಟು ಕರಕಲಾಗಿವೆ.

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ಪಕ್ಕದಲ್ಲೇ ಇದ್ದ ಮತ್ತೊಂದು ಶೋರೂಂಗೂ ಬೆಂಕಿ ವ್ಯಾಪಿಸಿದೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶೋರೂಂ ಮುಚ್ಚಿರುವಾಗ ಈ ಅವಘಡ ಸಂಭವಿಸಿದ್ದು, ಕಟ್ಟಡದಿಂದ ದಟ್ಟ ಹೊಗೆ ಹೊರಡುತ್ತಿರುವುದನ್ನು ನೋಡಿದ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.