ಡೈಲಿ ವಾರ್ತೆ: 11/JAN/2025

ಮಾಂಬಾಡಿಯವರಿಗೆ ಪಾರ್ಥಿಸುಬ್ಬ ಪ್ರಶಸ್ತಿ ಲಭಿಸಿರುವುದು ಯಕ್ಷಗಾನದ ಹಿರಿಮೆಯನ್ನು ಹೆಚ್ಚಿಸಿದೆ : ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು

ಉಡುಪಿ : ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಅನೇಕ ಪ್ರಸಿದ್ಧ ಭಾಗವತರ ಗುರುಗಳಾಗಿರುವ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರು ಲವಲವಿಕೆಯಿಂದ ಭಾಗವತಿಕೆಯ ಮೂಲ ಪಾಠವನ್ನು ಮಾಡುತ್ತಾ ಗಾನಾಮೃತದ ಮೂಲ ಸತ್ವವನ್ನು ವಿವರಿಸುತ್ತಾ ಪ್ರಸಿದ್ದಿ ಪಡೆದ ಭಾಗವತರು. ೭೫ರ ಇಳೀ ವಯಸ್ಸಿನಲ್ಲಿಯೂ ಅವರ ಪಾಠವನ್ನು ಮುಂದುವರಿಸಿರುವುದು ಶ್ಲಾಘನೀಯ. ಅವರ ಈ ಕಲಾಸಾಧನೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ೨೦೨೪ನೇ ಸಾಲಿನ ಪ್ರತಿಷ್ಠಿತ ` ಪಾರ್ಥಿಸುಬ್ಬ ಪ್ರಶಸ್ತಿ’ ನೀಡುತ್ತಿರುವುದು ಯಕ್ಷಗಾನ ಕಲೆಯ ಹಿರಿಮೆಯನ್ನು ಎತ್ತಿ ಹಿಡಿದಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಶನಿವಾರ ಕುಂದಾಪುರ ಸಮೀಪದ ತೆಕ್ಕಟ್ಟೆಯ ಹಯಗ್ರೀವ ಸಭಾಂಗಣದಲ್ಲಿ ಯಶಸ್ವೀ ಕಲಾವೃಂದ ಕೊಮೆ ವತಿಯಿಂದ ಹಮ್ಮಿಕೊಂಡ ‘ತೆಂಕುತಿಟ್ಟು ಭಾಗವತಿಕೆ ತರಗತಿ ಉದ್ಘಾಟನೆ ‘ ಕಾರ್ಯಕ್ರಮದಲ್ಲಿ ಪಾರ್ತಿಸುಬ್ಬ ಪ್ರಶಸ್ತಿ ವಿಜೇತ ಹಿರಿಯ ಭಾಗವತ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರನ್ನು ಅಭಿನಂದಿಸಿ ಮಾತನಾಡಿದರು.

ಅರ್ಹರಿಗೆ ಯಕ್ಷಗಾನ ಅಕಾಡೆಮಿಯ ಗೌರವಗಳು ಸಲ್ಲಬೇಕು ಎಂಬುದು ಅಧ್ಯಕ್ಷನಾಗಿ ನನ್ನ ಚಿಂತನೆಯಾಗಿದೆ. ಅದರಲ್ಲೂ ಯಕ್ಷಗಾನಕ್ಕಾಗಿ ತಮ್ಮನ್ನೇ ಮುಡಿಪಾಗಿಟ್ಟು, ಯಕ್ಷಗಾನದ ಏಳ್ಗೆಗಾಗಿ ಹಗಲಿರುಳು ಸೇವೆ ಸಲ್ಲಿಸಿದ ಹಿರಿಯ ಕಲಾವಿದರನ್ನು ಗುರುತಿಸಿ, ಸನ್ಮಾನಿಸಬೇಕು. ಈ ಮೂಲಕ ಯಕ್ಷಗಾನ ಕಲೆಯ ಉಳಿವಿಗೆ ಕಾರಣರಾದ ಈ ಮಹಾನ್ ಚೇತನಗಳಿಗೆ ಗೌರವ ಸಲ್ಲಬೇಕು ಎಂಬುದು ನನ್ನ ಆಶಯ. ಪ್ರಸ್ತುತ ಮಾಂಬಾಡಿ ಭಾಗವತರಿಗೆ ಈ ಪ್ರಶಸ್ತಿ ಸಲ್ಲುತ್ತಿರುವುದು ಯಕ್ಷಗಾನ ಕಲಾವಿದರು, ಅಭಿಮಾನಿಗಳಿಗೆ ಹೆಚ್ಚಿನ ಸಂತೋಷವನ್ನುoಟು ಮಾಡಿದೆ ಎಂದ ಅವರು ಯಶಸ್ವೀ ಕಲಾವೃಂದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಂದ ತೆಂಕುತಿಟ್ಟು ಹಿಮ್ಮೇಳ ತರಗತಿಯನ್ನು ಹಮ್ಮಿಕೊಂಡಿರುವುದು ಪ್ರಶಂಸನೀಯ ಎಂದರು.

ತರಗತಿಯನ್ನು ಉದ್ಘಾಟಿಸಿದ ಪ್ರಸಂಗಕರ್ತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಮಾತನಾಡಿ, ಕರಾವಳಿಯ ಅಭಿಮಾನದ ಕಲಾಸಂಸ್ಥೆಯಾದ ಯಶಸ್ವೀ ಕಲಾವೃಂದದ ಆಶ್ರಯದಲ್ಲಿ ಇನ್ನು ಮುಂದೆ ಬಡಗಿನ ಹಿಮ್ಮೇಳದೊಂದಿಗೆ ತೆಂಕುತಿಟ್ಟು ಹಿಮ್ಮೇಳ ತರಗತಿಯೂ ನಡೆಯುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಕಲಾವಿದ ಕೋಟ ಸುದರ್ಶನ ಉರಾಳ, ಶ್ವೇತಯಾನದ ಕಾರ್ಯಾಧ್ಯಕ್ಷ ಗೋಪಾಲ ಪೂಜಾರಿ ಕೊಮೆ, ಪವನ್ ಆಚಾರ್, ಕಾರ್ಯದರ್ಶಿ ವೆಂಕಟೇಶ ವೈದ್ಯ, ಮೋಹನಚಂದ್ರ ಪಂಜಿಗಾರು ಉಪಸ್ಥಿತರಿದ್ದರು.

ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗುರು ಲಂಬೋದರ ಹೆಗಡೆ ಪ್ರಾಸ್ತಾವಿಕ ಮಾತನ್ನಾಡಿದರು. ಪೂಜಾ ಆಚಾರ್, ಪಂಚಮಿ ವೈದ್ಯ ಕಾರ್ಯಕ್ರಮ ನಿರೂಪಿಸಿದರು.