ಡೈಲಿ ವಾರ್ತೆ: 13/JAN/2025

ತಂದೆ ಮೊಬೈಲ್ ಕೊಡಿಸಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಬಾಲಕ – ಮಗನ ಸ್ಥಿತಿ ನೋಡಿ ತಂದೆ ಆತ್ಮಹತ್ಯೆಗೆ ಶರಣು

ಮಹಾರಾಷ್ಟ್ರ(ನಾಂದೇಡ್): ತಂದೆ ಮೊಬೈಲ್ ಕೊಡಿಸಲಿಲ್ಲ ಎಂದು 16 ವರ್ಷದ ಬಾಲಕ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ತನ್ನ ಮಗನಿಗೆ ಒಂದು ಮೊಬೈಲ್ ಕೊಡಿಸಲು ಆಗಿಲ್ಲ ಎಂದು ತಂದೆಯೂ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಬಿಳೋಳಿ ತಾಲ್ಲೂಕಿನ ಮಿನಾಕಿ ಎಂಬಲ್ಲಿ ಈ ದುರ್ಘಟನೆ ನಡೆದಿದೆ.

ಮೃತರನ್ನು 16 ವರ್ಷದ ಬಾಲಕ ಓಂಕಾರ್ ಹಾಗೂ ಆತನ ತಂದೆ ರಾಜು (46) ಎಂದು ಗುರುತಿಸಲಾಗಿದೆ.

ರಾಜು ಅವರಿಗೆ ಮೂವರು ಮಕ್ಕಳು. ಕೊನೆಯ ಮಗ ಓಂಕಾರ್ ಹಾಸ್ಟೆಲ್ ಒಂದರಲ್ಲಿ ಇದ್ದುಕೊಂಡು 10 ನೇ ತರಗತಿ ಓದುತ್ತಿದ್ದ. ಮಕರ ಸಂಕ್ರಮಣದ ರಜೆಗೆ ಮನೆಗೆ ಬಂದಿದ್ದ. ಇದೇ ವೇಳೆ ಬಾಲಕ ಓಂಕಾ‌ರ್ ತನ್ನ ತಂದೆಗೆ ಸ್ಮಾರ್ಟ್‌ಫೋನ್ ಕೊಡಿಸುವಂತೆ ಒತ್ತಾಯಿಸುತ್ತಿದ್ದ. ಆದರೆ ಬಡ ರೈತ ಕುಟುಂಬದ ರಾಜು ಮಗನಿಗೆ ಸ್ಮಾರ್ಟ್‌ಫೋನ್‌ ಕೊಡಿಸಲು ಆಗಿರಲಿಲ್ಲ. ಇದರಿಂದ ಡೆತ್ ನೋಟ್ ಬರೆದಿಟ್ಟು ಹೊಲದಲ್ಲಿನ ಮರಕ್ಕೆ ಬಾಲಕ ನೇಣು ಹಾಕಿಕೊಂಡಿದ್ದ. ಅದೇ ರಾತ್ರಿ ಮಗನನ್ನು ಹುಡುಕಿಕೊಂಡು ಹೋಗಿದ್ದ ತಂದೆಯೂ ಮಗ ನೇಣು ಹಾಕಿಕೊಂಡಿದ್ದನ್ನು ನೋಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ನಾಂದೇಡ್ ಎಸ್‌ಪಿ ಅವಿನಾಶ್ ಕುಮಾ‌ರ್ ತಿಳಿಸಿದ್ದಾರೆ.

ಮೃತ ಬಾಲಕ ತಾಯಿ ನೀಡಿದ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದ. ಮೃತದೇಹಗಳನ್ನು ಬಿಳೋಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.