

ಡೈಲಿ ವಾರ್ತೆ: ಫೆ./02/2026


ನಿಯಂತ್ರಣ ತಪ್ಪಿ ಬೈಕ್ ಪಲ್ಟಿ: ಯಕ್ಷಗಾನ ಕಲಾವಿದ ಮೊಳಹಳ್ಳಿ ಹೆರಿಯ ನಾಯಕ್ ಹಿರಿಯ ಪುತ್ರ ಪ್ರಭಾಕರ್ ಮೆಂಡನ್ ಮೃತ್ಯು

ಕುಂದಾಪುರ| ಸವಾರನ ನಿಯಂತ್ರಣ ತಪ್ಪಿ ಬೈಕ್ ಪಲ್ಟಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿದ ದುರ್ಘಟನೆ ಬೈಂದೂರು ತಾಲೂಕಿನ ನಾಡಗುಡ್ಡೆಯಂಗಡಿಯ ಬೆಳ್ಳಾಡಿ ಪ್ರದೇಶದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
ಮೃತರನ್ನು ಕೋಟ ಮಣೂರು ಪಡುಕರೆ ನಿವಾಸಿ ಪ್ರಭಾಕರ್ ಮೆಂಡನ್ ಎಂದು ಗುರುತಿಸಲಾಗಿದೆ.
ಅವರು ಭಾನುವಾರ ರಾತ್ರಿ ಮಣೂರು ಪಡುಕರೆ ಮನೆಯಿಂದ ತಮ್ಮ ಪತ್ನಿಯ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ, ನಾಡಗುಡ್ಡೆಯಂಗಡಿಯ ಬೆಳ್ಳಾಡಿ ಬಳಿ ಅವರ ಬೈಕ್ ಸ್ಕಿಡ್ ಆಗಿ ರಸ್ತೆಯಲ್ಲಿ ಪಲ್ಟಿಯಾಗಿ ಗಂಭೀರ ಗಾಯಗೊಂಡಿದ್ದರು ತಕ್ಷಣ ಸ್ಥಳೀಯರು ಗಂಗೊಳ್ಳಿ ಆಪತ್‌ಭಾಂಧವ ಆಂಬುಲೆನ್ಸ್ ಸೇವೆಯ ಇಬ್ರಾಹಿಂ ಗಂಗೊಳ್ಳಿ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ಮಾಹಿತಿ ಪಡೆದ ತಕ್ಷಣವೇ ಅವರು ಸುಮಾರು 13 ಕಿಲೋಮೀಟರ್ ದೂರದ ಘಟನಾ ಸ್ಥಳಕ್ಕೆ ತಕ್ಷಣ ಧಾವಿಸಿದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಪ್ರಥಮವಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸುವ ವೇಳೆ, ದುರದೃಷ್ಟವಶಾತ್ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ಪ್ರಭಾಕರ್ ಮೆಂಡನ್ ಅವರು ಖ್ಯಾತ ಯಕ್ಷಗಾನ ಕಲಾವಿದ ದಿವಂಗತ ಮೊಳಹಳ್ಳಿ ಹೆರಿಯ ನಾಯಕ್ ಅವರ ಹಿರಿಯ ಪುತ್ರರಾಗಿದ್ದು, ಅವರ ಅಕಾಲಿಕ ನಿಧನದಿಂದ ಕುಟುಂಬದವರಲ್ಲಿ ಆಳವಾದ ಶೋಕದ ವಾತಾವರಣ ನಿರ್ಮಾಣವಾಗಿದೆ. ಮೃತರಿಗೆ ಒಬ್ಬ ಗಂಡು ಮತ್ತು ಒಬ್ಬ ಹೆಣ್ಣು ಮಗು ಇದ್ದು, ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.