ಡೈಲಿ ವಾರ್ತೆ: 15/JAN/2025

ಸ್ಯಾಂಡಲ್‌ವುಡ್‌ ಹಿರಿಯ ನಟ ‘ಸರಿಗಮ ವಿಜಿ’ ನಿಧನ

ಬೆಂಗಳೂರು: ‘ಸರಿಗಮ ವಿಜಿ’ ಎಂದೇ ಕರೆಯಲ್ಪಡುವ ನಟ ವಿಜಯಕುಮಾರ್(76) ಅವರು ಬುಧವಾರ (ಜ.15) ನಿಧನರಾದರು. ಅವರಿಗೆ ಇಬ್ಬರು ಪುತ್ರರು ಇದ್ದಾರೆ.

ಶ್ವಾಸಕೋಶದ ಸೋಂಕು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ವಾರದ ಹಿಂದೆ ದಾಖಲಿಸಲಾಗಿತ್ತು.

ಬೆಂಗಳೂರಿನ ವಿಮಾನಪುರದಲ್ಲಿ (ಎಚ್‌ಎಎಲ್ ಪ್ರದೇಶ) ಜನಿಸಿದ ವಿಜಯಕುಮಾರ್, ನಾಟಕದ ನಂಟು ಇಟ್ಟುಕೊಂಡು ಸಿನಿಮಾಲೋಕ ಪ್ರವೇಶಿಸಿದವರು. ‘ಬೆಳುವಲದ ಮಡಿಲಲ್ಲಿ’ ಚಿತ್ರದಲ್ಲಿ ಸಹ ನಿರ್ದೇಶಕನಾಗಿ, ನಟನಾಗಿ ಮೊದಲ ಹೆಜ್ಜೆ ಇಟ್ಟ ಅವರು ಎನ್‌ಜಿಇಎಫ್ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ದುಡಿದವರು. ಈ ಅವಧಿಯಲ್ಲೇ ಅವರು ‘ಸಂಸಾರದಲ್ಲಿ ಸರಿಗಮ’ ಎಂಬ ನಾಟಕ ಬರೆದರು. ಇದು ರವೀಂದ್ರ ಕಲಾಕ್ಷೇತ್ರ ಮತ್ತು ಪುರಭವನದಲ್ಲಿ ಪ್ರದರ್ಶನ ಕಂಡಿತ್ತು. ಇದರ ಯಶಸ್ಸು ಅವರಿಗೆ ‘ಸರಿಗಮ ವಿಜಿ’ ಎಂಬ ಹೆಸರು ತಂದುಕೊಟ್ಟಿತು.
ಶಂಕರ್‌ನಾಗ್‌, ಕಲ್ಯಾಣ್‌ಕುಮಾ‌ರ್, ಅನಂತನಾಗ್‌, ಅಂಬರೀಶ್‌, ವಿಷ್ಣುವರ್ಧನ್, ಟೈಗರ್ ಪ್ರಭಾಕ‌ರ್, ದೇವರಾಜ್, ದರ್ಶನ್, ಶಿವರಾಜ್‌ಕುಮಾ‌ರ್, ಪುನೀತ್ ರಾಜ್‌ಕುಮಾರ್ ಮುಂತಾದ ನಟರ ಜೊತೆ ವಿಜಯಕುಮಾ‌ರ್ ತೆರೆಹಂಚಿಕೊಂಡಿದ್ದಾರೆ. ಹಾಸ್ಯ ಪಾತ್ರಗಳಲ್ಲಿ ಸರಿಗಮ ವಿಜಿ ಮಿಂಚಿದ್ದರು. ಹಲವು ಧಾರಾವಾಹಿಗಳಲ್ಲೂ ಅವರು ಬಣ್ಣಹಚ್ಚಿದ್ದಾರೆ.

400ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅವರು 100ಕ್ಕೂ ಅಧಿಕ ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ತೆಲುಗು ವಿಜ್ಞಾನ ಸಮಿತಿ ನೀಡುವ ‘ಶ್ರೀಕೃಷ್ಣದೇವರಾಯ ಪುರಸ್ಕಾರ’, ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ.

ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಅವರ ನಿವಾಸದಲ್ಲಿ ನಾಳೆ ಬೆಳಿಗ್ಗೆ 10 ಗಂಟೆವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ವೇಳೆ ಅಂತ್ಯಕ್ರಿಯೆ ನಡೆಯಲಿದೆ.