ಡೈಲಿ ವಾರ್ತೆ: 16/JAN/2025
ನಟ ಸೈಫ್ ಅಲಿಖಾನ್ ಗೆ ಚಾಕು ಇರಿತ: ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲು
ಮುಂಬೈ: ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ ದುಷ್ಕರ್ಮಿಗಳು ಚಾಕು ಇರಿದಿದ್ದು, ಸದ್ಯ ಅವರನ್ನು ಮುಂಬೈ ನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಗಳ್ಳತನಕ್ಕೆ ಬಂದಿದ್ದ ದುಷ್ಕರ್ಮಿಯೊಬ್ಬ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರಿಗೆ ಚಾಕುವಿನಿಂದ ಹಲವು ಬಾರಿ ಇರಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈನ ಪಶ್ಚಿಮ ಬಾಂದ್ರಾದಲ್ಲಿರುವ ಅವರ ನಿವಾಸದಲ್ಲಿ ಮಧ್ಯರಾತ್ರಿ 2.30ರ ಸುಮಾರಿಗೆ ಘಟನೆ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಸೈಫ್ ಅಲಿ ಖಾನ್ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೆಯಲ್ಲಿದ್ದವರು ಎಚ್ಚರಗೊಂಡ ನಂತರ ದರೋಡೆಕೋರ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ವಿವರಿಸಿದ್ದಾರೆ. ಸೈಫ್ ಅಲಿ ಖಾನ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ತನಿಖೆ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಲ್ಲೆಗೊಳಗಾಗಿದ್ದ ಸೈಫ್ ಅಲಿ ಖಾನ್ ಅವರನ್ನು ಮುಂಜಾನೆ 3.30ಕ್ಕೆ ಆಸ್ಪತ್ರೆಗೆ ಕರೆತರಲಾಯಿತು. ಸೈಫ್ ಅವರಿಗೆ 2 ಕಡೆ ಚಾಕುವಿನಿಂದ ಆಳವಾಗಿ ಇರಿಯಲಾಗಿದೆ. ಬೆನ್ನುಮೂಳೆ ಸೇರಿದಂತೆ ಆರು ಭಾಗಗಳಲ್ಲಿ ಗಾಯಗಳಾಗಿವೆ. ಸದ್ಯ ತಜ್ಞ ವೈದ್ಯರು ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾರೆ’ಎಂದು ಲೀಲಾವತಿ ಆಸ್ಪತ್ರೆಯ ಸಿಒಒ ಡಾ.ನೀರಜ್ ಉತ್ತಮನಿ ಹೇಳಿದ್ದಾರೆ.