ಡೈಲಿ ವಾರ್ತೆ: 02/ಫೆ /2025

ಉಡುಪಿ ಪೊಲೀಸ್ ಎಸ್ಪಿ ಕಚೇರಿಯಲ್ಲಿ ನಕ್ಸಲ್ ಲಕ್ಷ್ಮೀ ಶರಣಾಗತಿ

ಉಡುಪಿ: ನಕ್ಸಲ್‌ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಚ್ಚಟ್ಟು ತೊಂಬಟ್ಟು ಗ್ರಾಮದ ನಕ್ಸಲ್ ಮಹಿಳೆ ಲಕ್ಷ್ಮೀ ಉಡುಪಿಯಲ್ಲಿ ಫೆ. 2 ರಂದು ರವಿವಾರ ಶರಣಾಗುವ ಮೂಲಕ ಮುಖ್ಯ ವಾಹಿನಿಗೆ ಬಂದಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಪ್ರಕ್ರಿಯೆ ನಡೆಸಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಣಾಗಿದ್ದಾರೆ. ಎಸ್ ಪಿ ಡಾ.ಕೆ ಅರುಣ್, ಹೆಚ್ಚುವರಿ ಎಸ್ಪಿ ಎಸ್‌ ಟಿ ಸಿದ್ದಲಿಂಗಪ್ಪ ಸಮ್ಮುಖದಲ್ಲಿ ತೊಂಬಟ್ಟು ಲಕ್ಷ್ಮೀ ಶರಣಾಗತಿ ಪ್ರಕ್ರಿಯೆ ನಡೆಯಿತು.

ಪೊಲೀಸ್‌ ಭದ್ರತೆಯೊಂದಿಗೆ ಎಸ್ಪಿ ಕಚೇರಿಗೆ ಆಗಮಿಸಿದ ಲಕ್ಷ್ಮೀ ಜೊತೆ ಆಕೆಯ ಸಹೋದರ ವಿಠಲ ಪೂಜಾರಿ ಹಾಗೂ ಸಂಬಂಧಿಕರಿದ್ದರು. ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿಯ ಸದಸ್ಯ ಶ್ರೀಪಾಲ ಈ ವೇಳೆ ಹಾಜರಿದ್ದರು.

ಈ ಸಂದರ್ಭದಲ್ಲಿ ಕುಂದಾಪುರ ಡಿವೈಎಸ್ಪಿ ಎಚ್ ಡಿ ಕುಲಕರ್ಣಿ, ಉಡುಪಿ ಡಿವೈಎಸ್ಪಿ ಡಿಟಿ ಪ್ರಭು ಹಾಗೂ ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಹಾಜರಿದ್ದರು.

ಲಕ್ಷ್ಮೀ ಮೇಲೆ ಶಂಕರನಾರಾಯಣ, ಅಮಾಸೆಬೈಲ್ ಪೊಲೀಸ್‌ ಠಾಣೆಯಲ್ಲಿ ಮೂರು ಪ್ರಕರಣಗಳಿವೆ. ಇದನ್ನು ಹೊರತುಪಡಿಸಿ ಬೇರೆಲ್ಲೂ ಇವಳ ಮೇಲೆ ಪ್ರಕರಣ ಇಲ್ಲ ಎಂದು ತಿಳಿದು ಬಂದಿದೆ.