ಡೈಲಿ ವಾರ್ತೆ: 06/ಫೆ. /2025

ಹಾವೇರಿ: ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಹಾಕಿದ್ದ ನರ್ಸ್ ಅಮಾನತು

ಬೆಂಗಳೂರು: ಬಾಲಕನ ಗಾಯಕ್ಕೆ ಹೊಲಿಗೆ ಬದಲು
ಫೆವಿಕ್ವಿಕ್ ಹಾಕಿ ಕರ್ತವ್ಯ ಲೋಪ ಎಸಗಿದ ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿಯನ್ನು ಅಮಾನತುಪಡಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಕೆನ್ನೆ ಗಾಯಮಾಡಿಕೊಂಡು ಆಸ್ಪತ್ರೆಗೆ ಬಂದಿದ್ದ 7 ವರ್ಷದ ಬಾಲಕನಿಗೆ ಚಿಕಿತ್ಸೆ ನೀಡಿ ಹೊಲಿಗೆ ಹಾಕುವುದರ ಬದಲಾಗಿ ಫೆವಿಕ್ವಿಕ್ ಹಚ್ಚಿ ಕಳುಹಿಸಿದ್ದರು. ಈ ವಿಷಯ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಮಾಹಿತಿ ಪಡೆದುಕೊಂಡರು. ಫೆವಿಕ್ವಿಕ್ ಒಂದು ಅಂಟು ದ್ರಾವಣವಾಗಿದ್ದು ವೈದ್ಯಕೀಯ ಬಳಕೆಗೆ ನಿಯಮದಲ್ಲಿ ಅವಕಾಶವಿಲ್ಲ.

ಈ ಪ್ರಕರಣದಲ್ಲಿ ಚಿಕಿತ್ಸೆಗೆ ಫೆವಿಕ್ವಿಕ್ ಬಳಸಿ ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದಿದೆ. ಹಾಗಾಗಿ ಪ್ರಾಥಮಿಕ ವರದಿ ಅನುಸಾರ ಸ್ಟಾಫ್ ನರ್ಸ್ ಅನ್ನು ಅಮಾನತುಗೊಳಿಸಿ ಕ್ರಮ ವಹಿಸಲಾಗಿದೆ. ಚಿಕಿತ್ಸೆಗೆ ಒಳಪಟ್ಟ ಮಗು ಆರೋಗ್ಯವಾಗಿದ್ದು ಯಾವುದೇ ಅಡ್ಡ ಪರಿಣಾಮವಾಗದಂತೆ ನಿಗಾ ವಹಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ ಪ್ರಕಟನೆಯಲ್ಲಿ ತಿಳಿಸಿದೆ.

7 ವರ್ಷದ ಗುರುಕಿಶನ್ ಅಣ್ಣಪ್ಪ ಹೊಸಮನಿ ಎಂಬ ಬಾಲಕನಿಗೆ ಕೆನ್ನೆ ಮೇಲೆ ಗಾಯ ಆಗಿತ್ತು. ಆಟ ಆಡುವಾಗ ಗುರುಕಿಶನ್ ಕೆನ್ನೆಗೆ ಗಾಯ ಮಾಡಿಕೊಂಡಿದ್ದ. ಕೆನ್ನೆಯ ಮೇಲಿನ ಗಾಯ ಬಹಳ ಆಳಕ್ಕೆ ಇಳಿದಿದ್ದರಿಂದ ರಕ್ತ ಕೂಡ ಸುರಿಯುತ್ತಿತ್ತು. ಕೂಡಲೇ ಬಾಲಕ ಗುರುಕಿಶನ್ ನನ್ನು ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕುಟುಂಬಸ್ಥರು ಕರೆದೊಯ್ದಿದ್ದರು. ವಿದ್ಯಾರ್ಥಿಗೆ ಗಾಯಕ್ಕೆ ಹೊಲಿಗೆ ಹಾಕೋದು ಬಿಟ್ಟು ಫೆವಿಕ್ವಿಕ್ ಗಮ್ ಅಂಟಿಸಿ ನರ್ಸ್‌ ಜ್ಯೋತಿ ಎನ್ನುವವರು ಚಿಕಿತ್ಸೆ ನೀಡಿದ್ದರು.

ಇತ್ತ ಬಾಲಕನಿಗೆ ಫೆವಿಕ್ವಿಕ್ ಯಾಕೆ ಹಾಕಿದ್ದೀರಿ ಅಂತ ಕೇಳಿದರೆ ಸ್ವಿಚ್ ಹಾಕಿದರೆ ಬಾಲಕನ ಕೆನ್ನೆ ಮೇಲೆ ಕಲೆ ಆಗ್ತಾ ಇತ್ತು ಎಂದು ಹೇಳಿದ್ದಾರೆ. ಹೀಗಾಗಿ ಚರ್ಮದ ಮೇಲಷ್ಟೇ ಫೆವಿಕ್ವಿಕ್ ಹಾಕಿ ಚಿಕಿತ್ಸೆ ನೀಡಿದ್ದೇನೆ ಎಂದು ನರ್ಸ್‌ ಜ್ಯೋತಿ ಹೇಳಿದ್ದಾರೆ.