ಡೈಲಿ ವಾರ್ತೆ: 08/ಫೆ. /2025

ದಾಳಿಂಬೆ ಹಣ್ಣಿನಿಂದ ಆರೋಗ್ಯಕ್ಕೆ ಪ್ರಯೋಜನಗಳು
ಇಲ್ಲಿದೆ ಮಾಹಿತಿ

ಪ್ರಕೃತಿ ಮನುಷ್ಯನ ಆರೋಗ್ಯಕ್ಕಾಗಿ ಹಲವಾರು ನೈಸರ್ಗಿಕ ಸತ್ವಗಳನ್ನು ಉಡುಗೊರೆಯಾಗಿ ನೀಡಿದೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ದೊರೆಯುವ ಹಲವಾರು ಹಣ್ಣು-ಹಂಪಲುಗಳು, ಗಿಡಮೂಲಿಕೆಗಳು ಆರೋಗ್ಯ ವೃದ್ಧಿಸುವಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ.

ನಮ್ಮ ಸುತ್ತಲೂ ಸಾಮಾನ್ಯವಾಗಿ ಸಿಗುವ ದಾಳಿಂಬೆ ಹಣ್ಣು ತನ್ನಲ್ಲಿ ಹಲವಾರು ಆರೋಗ್ಯದಾಯಕ ಅಂಶಗಳನ್ನು ಹೊಂದಿದೆ. ದಾಳಿಂಬೆ ಹಣ್ಣು ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ವೈರಲ್ ಮತ್ತು ಆ್ಯಂಟಿ ಟ್ಯೂಮರ್ ಗುಣಲಕ್ಷಣಗಳನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇ ಮತ್ತು ಫೋಲಿಕ್ ಆಮ್ಲ ಕೂಡ ಇದೆ. ಪ್ರತಿನಿತ್ಯ ದಾಳಿಂಬೆಯನ್ನು ತಿನ್ನುವುದು ಅಥವಾ ಜ್ಯೂಸ್ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಕೂಡ ವೃದ್ಧಿಯಾಗಲಿದೆ.

ಹೃದಯದ ಸಮಸ್ಯೆ ಪರಿಹಾರ:
ದಾಳಿಂಬೆ ಹಣ್ಣಿನಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶಗಳು ಹೇರಳವಾಗಿ ಇರುವ ಕಾರಣ ಹೃದಯಕ್ಕೆ ಮಾರಕ ಎನಿಸುವ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಉತ್ತಮ ಪರಿಹಾರ ಕಾರ್ಯನಿರ್ವಹಿಸುತ್ತದೆ ಮತ್ತು ಇದು ದೇಹದಲ್ಲಿ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುತ್ತದೆ.

ಉರಿಯೂತ ಕಡಿಮೆ ಮಾಡಲಿದೆ:
ದಾಳಿಂಬೆ ಬೀಜಗಳನ್ನು ನಿಯಮಿತವಾಗಿ ಸೇವಿಸುತ್ತಾ ಬರುವ ಮೂಲಕ ದೇಹದಲ್ಲಿ ಎದುರಾಗುವ ಉರಿಯೂತ ಮತ್ತು ಇತರ ಸಂಬಂಧಿತ ತೊಂದರೆಗಳಿಂದ ರಕ್ಷಣೆ ಒದಗುತ್ತದೆ. ಈ ಬಗ್ಗೆ ನಡೆದ ಅಧ್ಯಯನಗಳ ಮೂಲಕ ಫ್ರೀ ರ್ಯಾಡಿಕಲ್ ಎಂಬ ಕಣಗಳ ಉತ್ಕರ್ಷಣಶೀಲ ಘರ್ಷಣೆಯನ್ನು ತಡೆಯುವ ಕ್ಷಮತೆಯನ್ನು ದಾಳಿಂಬೆ ಬೀಜಗಳು ಹೊಂದಿವೆ.

ಒಸಡುಗಳನ್ನು ದೃಢಗೊಳಿಸುತ್ತದೆ:
ನಿಯಮಿತವಾಗಿ ದಾಳಿಂಬೆ ಬೀಜಗಳನ್ನು ಸೇವಿಸುವ ಮೂಲಕ ಒಸಡುಗಳು ದೃಢಗೊಳ್ಳುತ್ತವೆ ಹಾಗೂ ಸಡಿಲವಾದ ಹಲ್ಲುಗಳು ಗಟ್ಟಿಯಾಗುತ್ತವೆ. ಅಲ್ಲದೇ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ಈ ಬೀಜಗಳಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ನೆರವಾಗುತ್ತದೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ
ಈ ಬೀಜಗಳ ಸೇವನೆಯಿಂದ ಜೀರ್ಣಾಂಗಗಳ ಕ್ಷಮತೆ ಹೆಚ್ಚುತ್ತದೆ. ಇದಕ್ಕೆ ಇದರಲ್ಲಿರುವ ಬಿ-ಕಾಂಪ್ಲೆಕ್ಸ್ ವಿಟಮಿನ್ನುಗಳು ಕಾರಣ. ಈ ವಿಟಮಿನ್ನುಗಳು ದೇಹದಲ್ಲಿರುವ ಕೊಬ್ಬು, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟುಗಳನ್ನು ಶಕ್ತಿಯನ್ನಾಗಿ ಪರಿವರ್ತಿಸಲು ನೆರವಾಗುತ್ತವೆ. ದಾಳಿಂಬೆ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕರಗದ ನಾರು ಜೀರ್ಣಕ್ರಿಯೆಗೆ ಸಹಕರಿಸುವ ಮೂಲಕ ಜೀರ್ಣಕ್ರಿಯೆ ಸುಲಭವಾಗಲು ನೆರವಾಗುತ್ತದೆ.

ತೂಕ ಇಳಿಕೆಗೆ ಸಹಕಾರಿ:
ತೂಕ ಇಳಿಸುವ ಪ್ರಯತ್ನಲ್ಲಿದ್ದವರಿಗೆ ದಾಳಿಂಬೆ ಬೀಜಗಳು ವರದಾನವಾಗಿವೆ. ಇವುಗಳಲ್ಲಿರುವ ಕರಗದ ನಾರು ಹೆಚ್ಚಿನ ಹೊತ್ತು ಹೊಟ್ಟೆ ತುಂಬಿರುವ ಭಾವನೆ ಮೂಡಿಸಿ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ. ಅಲ್ಲದೇ ಇವುಗಳನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಕೊಬ್ಬನ್ನು ಬಳಸುವ ಮೂಲಕ ಸ್ಥೂಲಕಾಯದಿಂದ ಬಿಡುಗಡೆ ನೀಡುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ:
ಇದರಲ್ಲಿರುವ ಪ್ರಬಲ ಆಂಟಿ ಆಕ್ಸಿಡೆಂಟುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ ಈ ಬೀಜಗಳು ಬ್ಯಾಕ್ಟೀರಿಯಾ ಹಾಗೂ ವೈರಸ್ಸುಗಳನ್ನು ಕೊಂದು ಹಲವಾರು ರೋಗಗಳಿಂದ ರಕ್ಷಣೆ ಒದಗಿಸುತ್ತವೆ. ತನ್ಮೂಲಕ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ಗರ್ಭಿಣಿಯರಿಗೆ ಒಳ್ಳೆಯದು:
ದಾಳಿಂಬೆಯಲ್ಲಿ ಕಬ್ಬಿಣದ ಅಂಶವು ಸಮೃದ್ಧವಾಗಿದೆ. ಇದು ಕಬ್ಬಿಣದ ಕೊರತೆಯನ್ನು ತಡೆಯಲು ಗರ್ಭಿಣಿಯರಿಗೆ ಸಹಾಯ ಮಾಡುತ್ತದೆ.

ಗಂಟಲು ಸಮಸ್ಯೆಗೆ ಪರಿಹಾರ:
ಸಾಮಾನ್ಯವಾಗಿ ಹಲವರನ್ನು ಕಾಡುವ ಗಂಟಲು ಸಮಸ್ಯೆಗೆ ದಾಳಿಂಬೆ ಮದ್ದಾಗಿದ್ದು, ಗಂಟಲು ನೋವು, ಗಂಟಲು ಕಿರಿಕಿರಿ, ಇತ್ಯಾದಿಗಳಿಗೆ ದಾಳಿಂಬೆ ಹಣ್ಣಿನ ಪುಡಿಯನ್ನು ಬಳಕೆ ಮಾಡಬಹುದು.

ಒಂದು ಹಿಡಿ ದಾಳಿಂಬೆ ಹಣ್ಣಿನ ಒಣಗಿದ ಪುಡಿಯನ್ನು ತೆಗೆದುಕೊಂಡು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಇದನ್ನು ಸೋಸಿಕೊಂಡು ಬಾಯಿ ಮುಕ್ಕಳಿಸಿದರೆ ಗಂಟಲು ನೋವು ಮತ್ತು ಗಂಟಲಿನ ಸಮಸ್ಯೆಗಳು ಉಪಶಮನವಾಗುತ್ತದೆ.

ಮುಖದ ಕಾಂತಿಗೆ ಉಪಕಾರಿ:
ಮುಖದಲ್ಲಿ ಸುಕ್ಕುಗಳಾಗಿದ್ದರೆ ಅಥವಾ ಮುಖದ ಚರ್ಮ ಒಣಗಿರುವ ಅನುಭವವಾದಾಗ ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿಮಾಡಿಕೊಳ್ಳಿ. ಬಳಿಕ ಈ ಪುಡಿಗೆ ಹಾಲು ಬೆರಸಿ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿ. ಒಂದು ವೇಳೆ ನಿಮ್ಮದು ಎಣ್ಣೆಯುಕ್ತ ಚರ್ಮವಾಗಿದ್ದರೆ ರೋಸ್ ವಾಟರ್ ಅನ್ನು ಬಳಸಬಹುದಾಗಿದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳ ಮಾಹಿತಿಯನ್ನು ಆಧರಿಸಿದೆ. ಡೈಲಿ ವಾರ್ತೆ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.