ಡೈಲಿ ವಾರ್ತೆ: 10/ಫೆ. /2025

ಫೆ.12 ರಂದು ಬ್ರಹ್ಮಾವರ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕಚೇರಿ, ವೆಬ್‌ಸೈಟ್ ಉದ್ಘಾಟನೆ

ಬ್ರಹ್ಮಾವರ: ಬ್ರಹ್ಮಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಸಂಕಲ್ಪಿಸಿದ್ದು ಸುಮಾರು 17.75 ಕೋಟಿ ವೆಚ್ಚದಲ್ಲಿ ಗರ್ಭಗುಡಿ ಹಾಗೂ ಸುತ್ತು ಪೌಳಿಯ ಕಾಮಗಾರಿಯನ್ನು ಕೈಗೆತ್ತಿಗೊಳ್ಳಲು ನಿರ್ಧರಿಸಿದ್ದು ಅದಕ್ಕೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಂದ ಅನುಮತಿಯನ್ನು ಪಡೆಯಲಾಗಿದೆ.
ಈಗಾಗಲೆ ನಾಲ್ಕು ದಿನಗಳ ಕಾಲ ಅಷ್ಟಮಂಗಲ ಪ್ರಶ್ನೆ ನಡೆಸಿದ್ದು ಪ್ರಶ್ನೆಯಲ್ಲಿ ಸೂಚಿಸಿದ ಪ್ರಾಯಶ್ಚಿತ್ತ ವಿಧಿಗಳನ್ನು ಎರಡು ಹಂತದಲ್ಲಿ ನೆರವೇರಿಸಲಾಗಿದೆ.

ಜೀರ್ಣೊದ್ಧಾರಕ್ಕೆ ಪ್ರಧಾನ ಸಮಿತಿ ಹಾಗೂ 8 ಗ್ರಾಮ ಸಮಿತಿಗ¼ನ್ನು ಆಯ್ಕೆ ಮಾಡಲಾಗಿದೆ. ಈಗಾಗಲೆ ಧ್ವಜ ಮರವನ್ನು ತರಲಾಗಿದೆ. ಜೀರ್ಣೋದ್ಧಾರ ಚಟುವಟಿಕೆಗಳ ಅನುಕೂಲಕ್ಕಾಗಿ ಜೀರ್ಣೋದ್ಧಾರ ಕಚೇರಿ ನಿರ್ಮಿಸಿದ್ದು ಫೆ. 12ರಂದು ಈ ಕಚೇರಿಯ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟನೆಯನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶಪಾಲ ಸುವರ್ಣ ನೆರವೇರಿಸಲಿದ್ದಾರೆ. ಅದೇ ದಿನ ದೇವಾಲಯದ 3ಡಿ, ವೆಬ್‌ಸೈಟ್ ಉದ್ಘಾಟಿಸಲಿದ್ದು ಮನವಿ ಪತ್ರವನ್ನು ಬಿಡುಗಡೆ ಮಾಡಲಿದ್ದೇವೆ. ಅಲ್ಲದೆ ಆರಂಭಿಕ ಹಂತದಲ್ಲಿ ಸಹಕಾರ ನೀಡಿದ ಮಹನೀಯರನ್ನು ಸನ್ಮಾನಿಸಲಾಗುವುದು.

ಈ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಎಲ್ಲಾ ಭಕ್ತಾದಿಗಳು ಹಾಜರಾಗುವಂತೆ ಸಮಿತಿ ಅಧ್ಯಕ್ಷ ಗೋವಿಂದ್ರಾಜ್ ಹೆಗ್ಡೆ ಮನವಿ ಮಾಡಿದರು. ಅವರು ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಸಮಿತಿಯ ಕಚೇರಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಗೋವಿಂದರಾಜ್ ಹೆಗ್ಡೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಶಾಸಕ ಯಶಪಾಲ್ ಸುವರ್ಣ, ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ|ನಿ.ಬಿ.ವಿಜಯ ಬಲ್ಲಾಳ್, ದೇವಸ್ಥಾನದ ಪ್ರಧಾನ ಅರ್ಚಕ ಶಿವರಾಮ್ ಭಟ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಅಶೋಕ್ ಭಟ್, ಆಡಳಿತಾಧಿಕಾರಿ ರಾಜು, ಸಮಿತಿಯ ಸದಸ್ಯರಾದ ರಾಜಾರಾಮ ಶೆಟ್ಟಿ ಆಶ್ರಯ ಬ್ರಹ್ಮಾವರ, ರಾಮಕೃಷ್ಣ ಶೆಟ್ಟಿ ಬ್ರಹ್ಮಾವರ, ನವೀನ್‌ಚಂದ್ರ ನಾಯಕ್ ವಾರಂಬಳ್ಳಿ, ಶ್ರೀಮತಿ ಸರೋಜ ನಾಯರಿ ಚಾಂತಾರು, ಜಯರಾಮ ನಾಯ್ಕ ಚಾಂತಾರು, ಸಂತೋಷ ಶೆಟ್ಟಿ ಚಾಂತಾರು, ಲಕ್ಷ್ಮೀನಾರಾಯಣ ಭಟ್ ಚಾಂತಾರು, ಅಶೋಕ್ ಪೂಜಾರಿ ಹಾರಾಡಿ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಮಟಪಾಡಿ ಸ್ವಾಗತಿಸಿದರು.