ಡೈಲಿ ವಾರ್ತೆ: ಫೆ./03/2026

ಪೊಲೀಸರ ಮೇಲಿನ ಹಲ್ಲೆ ಪ್ರಕರಣ: ಕಾಂಗ್ರೆಸ್ ನಾಯಕ ಅಯೂಬ್ ಪೈಲ್ವಾನ್‍ ಇಬ್ಬರು ಪುತ್ರರ ಬಂಧನ

ದಾವಣಗೆರೆ, ಫೆ.3: ಚಿಗಟೀರಿ ಜಿಲ್ಲಾಸ್ಪತ್ರೆ ಸಮೀಪ ಪೊಲೀಸರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಅಯೂಬ್ ಪೈಲ್ವಾನ್‍ ಅವರ ಇನ್ನಿಬ್ಬರು ಪುತ್ರರನ್ನು ಪೊಲೀಸರು ಬಂಧಿಸಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.

ತಲೆಮರೆಸಿಕೊಂಡಿದ್ದ ಹುಸೇನ್ ಹಾಗೂ ಹಮ್ಝಾ ಬಂಧಿತ ಆರೋಪಿಗಳಾಗಿದ್ದು, ಮೊಬೈಲ್ ಲೊಕೇಷನ್ ಹಾಗೂ ಕಾಲ್ ಡಿಟೇಲ್ ರೆಕಾರ್ಡ್‌ (ಸಿಡಿಆರ್) ಮಾಹಿತಿಗಳ ಆಧಾರದ ಮೇಲೆ ನಗರ ಪೊಲೀಸರು ಇವರನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಕಳೆದ ಶನಿವಾರ ಹಲ್ಲೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ಬಡಾವಣೆ ಪೊಲೀಸ್ ಠಾಣೆಯ ಸಿಪಿಐ ಗಾಯಿತ್ರಿ ಹಾಗೂ ಕಾನ್ಸ್‌ಟೇಬಲ್‌ಗಳಾದ ಹರೀಶ್ ಮತ್ತು ಕೆಂಚಪ್ಪ ತೆರಳಿದ್ದ ಸಂದರ್ಭದಲ್ಲಿ, ಆರೋಪಿಗಳು ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಯೂಬ್ ಪೈಲ್ವಾನ್‍ ಅವರ ಮತ್ತೊಬ್ಬ ಪುತ್ರ ಹಸೇನ್‍ನನ್ನು ಪೊಲೀಸರು ಬಂಧಿಸಿದ್ದು, ತನಿಖೆ ವೇಳೆ ಉಳಿದ ಇಬ್ಬರು ಪುತ್ರರು ತಲೆಮರೆಸಿಕೊಂಡಿರುವುದು ತಿಳಿದುಬಂದಿತ್ತು.

ಆರೋಪಿಗಳ ಬಂಧನಕ್ಕಾಗಿ ಸಿಟಿ ಡಿವೈಎಸ್ಪಿ ಶರಣಬಸವೇಶ್ವರ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ತಾಂತ್ರಿಕ ಮಾಹಿತಿ ಆಧರಿಸಿ ಯಶಸ್ವಿಯಾಗಿ ಬಂಧನ ನಡೆಸಲಾಗಿದೆ.

ಬಂಧಿತ ಆರೋಪಿಗಳನ್ನು ಇಂದು (ಫೆ.3) ಮೆಡಿಕಲ್ ಪರೀಕ್ಷೆಗೆ ಒಳಪಡಿಸಿ, ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.