ಡೈಲಿ ವಾರ್ತೆ: 13/ಫೆ. /2025

14 ದಿನದ ಮಗು, ಪತಿ ತ್ಯಜಿಸಿ ನೇಣಿಗೆ ಶರಣಾದ ಮಹಿಳೆ

ಮಡಿಕೇರಿ: 14 ದಿನದ ಮಗು ಹಾಗೂ ಪತಿಯನ್ನು ತ್ಯಜಿಸಿ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೊಟ್ಟೋಳಿಯಲ್ಲಿ ನಡೆದಿದೆ.

ವಿರಾಜಪೇಟೆ ತಾಲೂಕು ಕರಡ ನಿವಾಸಿ ದಿವಂಗತ ಕಟ್ಟಿ ಬಿದ್ದಪ್ಪ-ಶೀಲಾ ದಂಪತಿ ಪುತ್ರಿ ಕೊಟ್ಟೋಳಿ ಗ್ರಾಮದ ನಿವಾಸಿ ಎಂ.ಎಂ ದಿನೇಶ್ ಎಂಬುವವರ ಪತ್ನಿ ಕಾವೇರಮ್ಮ (24) ನೇಣಿಗೆ ಶರಣಾದ ಮಹಿಳೆ.

ದಿನೇಶ್-ಕಾವೇರಮ್ಮ ಮದುವೆಯಾಗಿ ಸುಮಾರು 4 ವರ್ಷಗಳು ಕಳೆದಿದೆ. ಫೆ.12 ರಂದು ಪತಿ ದಿನೇಶ್ ತಮ್ಮ ಮನೆಯ ಸನೀಹದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಮನೆಯಲ್ಲಿ ಮಗುವಿನ ಕೂಗಾಟ ಕೇಳಿ ಬಂದು ನೋಡುವಾಗ ಕಾವೇರಮ್ಮ ಸ್ನಾನದ ಕೋಣೆಯಲ್ಲಿ ಸೀರೆಯಿಂದ ನೇಣುಬಿಗಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲ. ಮೃತಳ ಅಣ್ಣ ಎಂ.ಎ ತಿಮ್ಮಯ್ಯ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.