ಡೈಲಿ ವಾರ್ತೆ: 18/ಫೆ. /2025

ನೆಲ್ಲಿಕಾಯಿ ನೀರು ಸೇವನೆಯಿಂದ ಅರೋಗ್ಯಕ್ಕೆ ಪ್ರಯೋಜನಗಳು

ನೆಲ್ಲಿಕಾಯಿ ನೀರು:
ನೆಲ್ಲಿಕಾಯಿ ಔಷಧೀಯ ಗುಣವುಳ್ಳ ಹಣ್ಣು. ನೆಲ್ಲಿಕಾಯಿಯ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ನೀವು ಬೇರೆ ಬೇರೆ ರೀತಿಯಲ್ಲಿ ಇದನ್ನು ಬಳಸಬಹುದು. ಅದರಲ್ಲಿ ಒಂದು ನೆಲ್ಲಿಕಾಯಿ ನೀರು ನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವನೆಯಿಂದ ಹಲವು ಪ್ರಯೋಜನಗಳಿವೆ.

ಈ ನೀರು ತಯಾರಿಸುವುದು ಹೇಗೆ?
ಒಂದು ಲೋಟ ನೀರಿನಲ್ಲಿ ಒಂದು ಚಮಚ ನೆಲ್ಲಿಕಾಯಿ ಪುಡಿಯನ್ನು ಬೆರಸಿ ಮಿಶ್ರಣ ಮಾಡಿ ಸೇವಿಸಿ. ಇದನ್ನು ನಿತ್ಯ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ನೀವು ಮನೆಯಲ್ಲೇ ನೆಲ್ಲಿಕಾಯಿ ಪುಡಿ ತಯಾರಿಸಬಹುದು. ನೆಲ್ಲಿಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಒಂದೆರಡು ದಿನ ಬಿಸಿಲಿನಲ್ಲಿ ಒಣಗಿಸಿ. ಈ ಒಣ ನೆಲ್ಲಿಕಾಯಿ ತುಂಡುಗಳನ್ನು ಬ್ಲೆಂಡರ್‌ನಲ್ಲಿ ಪುಡಿ ಮಾಡಿ ಬಳಸಿ

ಪೌಷ್ಟಿಕಾಂಶಗಳು:
ನೆಲ್ಲಿಕಾಯಿ 100 ಗ್ರಾಂಗೆ 60 ಕ್ಯಾಲೋರಿಗಳನ್ನು ಹೊಂದಿದೆ. ಇದರಲ್ಲಿ ಆಹಾರದ ಫೈಬರ್, ಕಾರ್ಬೋಹೈಡ್ರೆಟ್ಸ್ ಸಮೃದ್ಧವಾಗಿದೆ. ಜೊತೆಗೆ ವಿಟಮಿನ್ ಎ, ವಿಟಮಿನ್ ಸಿ, ಪಿರಿಡಾಕ್ಸಿನ್, ರಿಬೋಫ್ಲಾವಿನ್, ಸೋಡಿಯಂ, ಪೊಟ್ಯಾಸಿಯಮ್, ಕ್ಯಾರೋಟಿನ್, ಕ್ಯಾಲ್ಸಿಯಂ, ತಾಮ್ರ, ಸತು, ರಂಜಕ, ಮ್ಯಾಂಗನೀಸ್, ಮೆಗ್ನಿಸಿಯಮ್, ಕಬ್ಬಿಣದಂತಹ ಖನಿಜಗಳೂ ಇವೆ

ರೋಗ ನಿರೋಧಕ ಶಕ್ತಿ:
ನೆಲ್ಲಿಕಾಯಿ ದೇಹದ ರೋಗನಿರೋಧಕ ಶಕ್ತಿ ಸುಧಾರಿಸುವ ಆಂಟಿ ವೈರಲ್ ಗುಣಲಕ್ಷಣಗಳಿಗೆ ಹೆಸರುವಾಸಿ. ಶುಂಠಿ, ಜೇನುತುಪ್ಪದ ಜತೆ ಇದನ್ನು ಸಂಯೋಜಿಸಿದಾಗ ಗಂಟಲು ನೋವು ಮತ್ತು ಶೀತವನ್ನು ಗುಣಪಡಿಸುವಲ್ಲಿ ಇದು ಉತ್ತಮ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ

ತೂಕ ನಷ್ಟಕ್ಕೆ ಸಹಾಯಕ:
ನೆಲ್ಲಿಕಾಯಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವ ಹೆಚ್ಚಿನ ಮಟ್ಟದ ಅಮೈನೋ ಆಮ್ಲಗಳನ್ನು ಹೊಂದಿದೆ. ಅದು ದೇಹದಲ್ಲಿ ಕೊಬ್ಬಿನ ಶೇಖರಣೆ ತಗ್ಗಿಸಲು ನೆರವಾಗುತ್ತದೆ. ಊಟಕ್ಕೆ ಮೊದಲು ನಿಯಮಿತವಾಗಿ ನೆಲ್ಲಿಕಾಯಿ ನೀರು ಸೇವಿಸುವುದು ತೂಕ ನಿರ್ವಹಣೆಗೆ ನೆರವು ನೀಡುತ್ತದೆ.

ರಕ್ತದ ಸಕ್ಕರೆ ಮಟ್ಟ ನಿಯಂತ್ರಣ:
ರಕ್ತದ ಸಕ್ಕರೆ ಮಟ್ಟ ನಿಯಂತ್ರಣದಲ್ಲೂ ನೆಲ್ಲಿಕಾಯಿ ನೀರು ಸಹಾಯ ಮಾಡುತ್ತದೆ. ನೆಲ್ಲಿಕಾಯಿಯಲ್ಲಿರುವ ಕ್ರೋಮಿಯಂ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಈ ಮೂಲಕ ಮಧುಮೇಹ ನಿರ್ವಹಣೆಯಲ್ಲೂ ಇದು ಸಹಾಯಕವಾಗಿದೆ

ಉತ್ತಮ ಜೀರ್ಣಕ್ರಿಯೆ:
ನೆಲ್ಲಿಕಾಯಿಯಲ್ಲಿ ಫೈಬರ್ ಉತ್ತಮ ಪ್ರಮಾಣದಲ್ಲಿದೆ. ಇದು ಜಠರಗರುಳಿನ ಪ್ರದೇಶವನ್ನು ಸ್ವಚ್ಛವಾಗಿಡುವ ಮೂಲಕ ಆರೋಗ್ಯಕರ ಕರುಳಿನ ಚಲನೆಗೆ ನೆರವಾಗುತ್ತದೆ. ಜೊತೆಗೆ ಇದು ದೇಹದಿಂದ ಹಾನಿಕಾರಕ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅಲ್ಲದೆ ಮಲಬದ್ಧತೆಯಂತಹ ಸಮಸ್ಯೆಯನ್ನೂ ದೂರವಾಗಿಸುವುದಕ್ಕೂ ಇದು ಸಹಕಾರಿ

ತ್ವಚೆಗೆ ನೆಲ್ಲಿಕಾಯಿ ಪ್ರಯೋಜನಗಳು:
ತ್ವಚೆಯ ಆರೋಗ್ಯ ಸುಧಾರಿಸುವುದಕ್ಕೂ ನೆಲ್ಲಿಕಾಯಿ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಮೊಡವೆಗಳನ್ನು ಗುಣಪಡಿಸಲು, ಚರ್ಮದ ಕಿರಿಕಿರಿ ತಗ್ಗಿಸಲು, ಚರ್ಮದ ಹೊಳಪು ಹೆಚ್ಚಿಸಲು, ತ್ವಚೆಯ ವಯಸ್ಸಾಗುವಿಕೆಯ ಚಿಹ್ನೆ ತಡೆಯಲು ನೆಲ್ಲಿಕಾಯಿ ಸಹಾಯ ಮಾಡುತ್ತದೆ

ಎಷ್ಟು ಪ್ರಮಾಣ ಸೇವಿಸಬಹುದು?
ನೆಲ್ಲಿಕಾಯಿಯ ಉತ್ತಮ ಪ್ರಯೋಜನ ಪಡೆಯಲು ನಿತ್ಯ ಒಂದು ನೆಲ್ಲಿಕಾಯಿ ಅಥವಾ 10-20 ಮಿಲಿ ನೆಲ್ಲಿಕಾಯಿ ರಸವನ್ನು ತೆಗೆದುಕೊಳ್ಳಿ. ನೀವು ಪ್ರತಿದಿನ 4 ಗ್ರಾಂ ಆಮ್ಲಾ ಪುಡಿಯನ್ನು ಸಹ ಬಳಸಬಹುದು. ಕೆಲವೊಮ್ಮೆ ಮಿತಿಗಿಂತ ಹೆಚ್ಚಿನ ಪ್ರಮಾಣದ ಸೇವನೆ ಕೆಲ ಅಡ್ಡ ಪರಿಣಾಮಗಳನ್ನೂ ತರಬಹುದು. ಹೀಗಾಗಿ ತಜ್ಞರ ಸೂಚನೆಯನ್ನು ಪಡೆಯುವುದೂ ಉತ್ತಮ