ಡೈಲಿ ವಾರ್ತೆ: 22/ಫೆ. /2025

ಮರ ಹತ್ತಿ ಆನೆ ದಾಳಿಯಿಂದ ತಪ್ಪಿಸಿಕೊಂಡ ಇಟಿಎಫ್ ಸಿಬ್ಬಂದಿ!

ಚಿಕ್ಕಮಗಳೂರು: ಕಾಫಿನಾಡ ಮಲೆನಾಡು ಭಾಗದಲ್ಲಿ ಆನೆ ಹಾವಳಿ ಮುಂದುವರೆದಿದ್ದು ಆನೆ ದಾಳಿಯಿಂದ ಎಲಿಫೆಂಟ್ ಟಾಸ್ಕ್ ಫೋರ್ಸ್ (ETF) ಸಿಬ್ಬಂದಿಯೊಬ್ಬರು ಮರಹತ್ತಿ ಜೀವ ಉಳಿಸಿಕೊಂಡಿರುವ ಘಟನೆ ಎನ್.ಆರ್.ಪುರ ತಾಲೂಕಿನ ಸಾಲೂರು ಅರಣ್ಯದಲ್ಲಿ ನಡೆದಿದೆ.

ಎನ್.ಆರ್.ಪುರ ತಾಲೂಕಿನಲ್ಲಿ ಇತ್ತಿಚೆಗೆ ಆನೆ ಹಾವಳಿ ಮಿತಿ ಮೀರಿದೆ. ಕಾಡಾನೆಗಳು ಪ್ರತಿನಿತ್ಯ ಪುಂಡಾಟ ಮೆರೆಯುತ್ತಿದ್ದು, ಮೂರು ತಿಂಗಳಲ್ಲಿ ಇಬ್ಬರು ಆನೆ ದಾಳಿಗೆ ತುತ್ತಾಗಿದ್ದಾರೆ.‌

ಶುಕ್ರವಾರ ಕೂಡ ಕಾಫಿತೋಟಕ್ಕೆ ಬಂದಿದ್ದ ಪುಂಡಾನೆಯೊಂದನ್ನು ಓಡಿಸಲು ಹೋಗಿದ್ದ ಇಟಿಎಫ್ ಸಿಬ್ಬಂದಿ ಮೇಲೆಯೇ ಆನೆಯೊಂದು ದಾಳಿ ಮಾಡಲು ಮುಂದಾಗಿದೆ.
ಸಾಲೂರು ಗ್ರಾಮಕ್ಕೆ ಎಂಟ್ರಿ ಕೊಟ್ಟಿದ್ದ ಕಾಡಾನೆಯನ್ನು ಓಡಿಸುವ ವೇಳೆ ಆನೆ ಇಟಿಎಫ್ ಸಿಬ್ಬಂದಿ ಮೇಲೆ ದಾಳಿ ನಡೆಸಲು ಮುಂದಾಗಿದೆ. ತಕ್ಷಣ ಎಚ್ಚೆತ್ತ ಇಟಿಎಫ್ ಸಿಬ್ಬಂದಿ ಮರವನ್ನೇರಿ ಜೀವ ಉಳಿಸಿಕೊಂಡಿದ್ದಾರೆ.

ಮರವೇರಿ ಕುಳಿತ ನಂತರವೂ ಕಾಡಾನೆ ಮರವನ್ನು ಅಲುಗಾಡಿಸಲು ಮುಂದಾಗಿದ್ದು, ಈ ದೃಶ್ಯವನ್ನು ಮರದ ಮೇಲೆ ಕುಳಿತುಕೊಂಡು ಆನೆ ನಿಗ್ರಹ ದಳದ ಸಿಬ್ಬಂದಿ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಆನೆ ದಾಳಿ ಹಾಗೂ ಹಾವಳಿಯಿಂದ ಕಂಗೆಟ್ಟಿರುವ ಜನ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಆನೆ ಹಾವಳಿಗೆ ಶಾಶ್ವತ ಬ್ರೇಕ್ ಹಾಕಬೇಕೆಂದು ಆಗ್ರಹಿಸಿದ್ದಾರೆ.