ಡೈಲಿ ವಾರ್ತೆ: 24/ಫೆ. /2025

ಪೌಷ್ಟಿಕ ಆಹಾರ ಅಕ್ರಮ ದಾಸ್ತಾನು ಪ್ರಕರಣ| ಮತ್ತೆ 6 ಮಂದಿ ಬಂಧನ

ಹುಬ್ಬಳ್ಳಿ: ಅಂಗನವಾಡಿ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ನೀಡಬೇಕಾದ ಪೌಷ್ಟಿಕ ಆಹಾರಗಳ ಅಕ್ರಮ ದಾಸ್ತಾನು ಪ್ರಕರಣಕ್ಕೆ ಸಂಬಂಧಿಸಿದಂತೆ ಕಸಬಾ ಠಾಣೆ ಪೊಲೀಸರು ಮತ್ತೆ ಆರು ಮಂದಿಯನ್ನು ಬಂಧಿಸಿದ್ದಾರೆ.

ಸೋನಿಯಾಗಾಂಧಿ ನಗರದ ಅಲ್ತಾಫ್ ಕಲಾದಗಿ, ಕೇಶ್ವಾಪುರ ಸಲೀಂ ಬೇಪಾರಿ, ಉದಯನಗರದ ಸಲೀಂ ಶೇಖ, ಮೆಹಬೂಬನಗರದ ಸಲೀಂ ಅತ್ತಾರ, ಬಂಕಾಪುರ ಚೌಕದ ದಾಪೀರ್ ಚೌಧರಿ ಮತ್ತು ಬಸವರಾಜ ವಾಲ್ಮೀಕಿ ಬಂಧಿತರು. ಪ್ರಕರಣದ ಪ್ರಮುಖ ಆರೋಪಿ ಬೈತುಲ ಕಿಲ್ಲೆದಾರ ಅವರು ತಲೆಮರೆಸಿಕೊಳ್ಳಲು ಇವರು ಸಹಾಯ ಮಾಡಿದ್ದರು ಎನ್ನುವ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹುಬ್ಬಳ್ಳಿ ಪೌಷ್ಟಿಕ ಆಹಾರ ಅಕ್ರಮ ದಾಸ್ತಾನು ಪ್ರಕರಣ
ಪ್ರಕರಣದ ಪ್ರಮುಖ ಆರೋಪಿ ಬೈತುಲ ಕಿಲ್ಲೆದಾರ ಮತ್ತು ಫಾರುಕ್‌ ಶೇಖ್ ದೊಡ್ಡಮನಿ ತಲೆಮರೆಸಿಕೊಂಡು ಒಂದು ವಾರವಾಗಿದ್ದು, ಪೊಲೀಸರು ಅವರ ಪತ್ತೆಗೆ ಎರಡು ಪ್ರತ್ಯೇಕ ತಂಡಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಾಹಿತಿ ಅಧರಿಸಿ ಸಿಸಿಬಿ ಮತ್ತು ಕಸಬಾ ಠಾಣೆ ಪೊಲೀಸರು ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಕ್ಕೆ ತೆರಳಿ ಶೋಧಕಾರ್ಯ ನಡೆಸುತ್ತಿದ್ದಾರೆ.

“ಆರೋಪಿಗಳು ವಾಟ್ಸ್​​​​​ಆ್ಯಪ್​​ ಕರೆ ಮೂಲಕ ಕೆಲವರ ಜೊತೆ ಸಂಪರ್ಕದಲ್ಲಿರುವುದು ತಿಳಿದು ಬಂದಿದೆ. ಆದರೆ, ಈ ಕರೆ ಜಾಡು ಹಿಡಿದು ಟವ‌ರ್​ ಲೊಕೆಷನ್ ಪತ್ತೆ ಹಚ್ಚುವುದು ಕಷ್ಟ. ಕಾರ್ಯಾಚರಣೆ ಚುರುಕುಗೊಂಡಿದ್ದು, ಶೀಘ್ರ ಕರೆತರಲಾಗುವುದು” ಎಂದು ಡಿಸಿಪಿ ಮಹಾನಿಂಗ ನಂದಗಾವಿ ತಿಳಿಸಿದ್ದಾರೆ.

ಧಾರವಾಡ ಉಪನಿರ್ದೇಶಕಿ, ಸಿಡಿಪಿಒ ಅಮಾನತು: ಇದೇ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿದ ಆರೋಪದಡಿ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಡಾ. ಹುಲಿಗೆಮ್ಮ ಕುಕನೂರು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಮುತ್ತಣ್ಣ ಸಿ.ಎ ಅವರನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಳ‌ರ್ ಸೂಚನೆ ಮೇರೆಗೆ ಮೊನ್ನೆ ತಾನೇ ಅಮಾನತುಗೊಳಿಸಲಾಗಿತ್ತು.

ಹಳೇ ಹುಬ್ಬಳ್ಳಿಯ ಗಟ್ಟೂರು ಕ್ರಾಸ್ ಬಳಿ ಇರುವ ಆಹಾರ ಗೋದಾಮಿನಲ್ಲಿ ಅಂಗನವಾಡಿ ಫಲಾನುಭವಿಗಳಿಗೆ ವಿತರಿಸುವ ಪೌಷ್ಟಿಕ ಸಾಮಗ್ರಿಗಳಾದ ತೊಗರಿ ಬೇಳೆ, ಹೆಸರು ಕಾಳು, ಬೆಲ್ಲ, ಸಕ್ಕರೆ, ಗೋಧಿಹಿಟ್ಟನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಪ್ರಕರಣ ಇದಾಗಿದೆ.