


ಡೈಲಿ ವಾರ್ತೆ: 28/ಫೆ. /2025


ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ: ಚಾಲಕ ಸೇರಿ ಎಲ್ಲರೂ ಪ್ರಾಣಾಪಾಯದಿಂದ ಪಾರು
ಚಿಕ್ಕಮಗಳೂರು| ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಸೇರಿದ ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ. ಚಿಕ್ಕಮಗಳೂರು ತಾಲೂಕಿನ ಲಕ್ಯಾ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ.
ಇಂದು (ಫೆಬ್ರವರಿ 28) ಬಸವ ತತ್ವ ಕಾರ್ಯಕ್ರಮ ಮುಗಿಸಿ ವಾಪಸ್ ಚಿಕ್ಕಮಗಳೂರು ನಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಹಿಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಇನ್ನು ಅದೃಷ್ಟವಶಾತ್ ವಿಜಯೇಂದ್ರ ಅವರು ಬೇರೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದರಿಂದ ಬಚಾವ್ ಆಗಿದ್ದಾರೆ. ಸದ್ಯ ಪೊಲೀಸರು ಲಾರಿ ಚಾಲಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವಿಜಯೇಂದ್ರಗೆ ಸೇರಿದ ಕಾರಿನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೊರ ಜಿಲ್ಲೆಗಳಿಗೆ ತೆರಳುವಾಗ ವಿಜಯೇಂದ್ರ ಅವರು ಇದೇ ಕಾರನ್ನು ಬಳಸುತ್ತಿದ್ದರು. ಆದ್ರೆ, ಅದೃಷ್ಟವಶಾತ್ ಇಂದು ಮತ್ತೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.
ಇನ್ನು ಬೀರೂರು ಮೂಲದ ಹರೀಶ್ ಎಂಬುವರಿಗೆ ಸೇರಿದ ಲಾರಿ ಮರದ ಪೀಸ್ ತುಂಬಿಕೊಂಡು ಚಿಕ್ಕಮಗಳೂರು ನಗರದಿಂದ ಮುಂಬಯಿಗೆ ತೆರಳುತ್ತಿತ್ತು. ಸದ್ಯ ಪೊಲೀಸರು ಕಾರು ಸೇರಿದಂತೆ ಲಾರಿಯನ್ನು ಸಹ ಗ್ರಾಮಾಂತರ ಠಾಣೆಗೆ ತೆಗೆದುಕೊಂಡು ಹೋಗಿದ್ದು, ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲು ಸಿದ್ದತೆ ನಡೆಸಿದ್ದಾರೆ.