

ಡೈಲಿ ವಾರ್ತೆ: 03/ಮಾರ್ಚ್ /2025


ಬೆಳಗಾವಿ| ರಿಯಲ್ ಎಸ್ಟೇಟ್ ಉದ್ಯಮಿ ಕಿಡ್ನ್ಯಾಪ್ ಪ್ರಕರಣ – ಸಚಿವ ಸತೀಶ್ ಜಾರಕಿಹೊಳಿ ಆಪ್ತೆ ಬಂಧನ

ಬೆಳಗಾವಿ: 5 ಕೋಟಿ ರೂ. ಹಣಕ್ಕಾಗಿ ರಿಯಲ್ ಎಸ್ಟೇಟ್ ಉದ್ಯಮಿ ಕಿಡ್ನ್ಯಾಪ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸತೀಶ್ ಜಾರಕಿಹೊಳಿ ಆಪ್ತೆಯನ್ನು ಘಟಪ್ರಭಾ ಪೊಲೀಸರು ಬಂಧಿಸಿದ್ದಾರೆ.
ಮಂಜುಳಾ ರಾಮಗನಟ್ಟಿ ಬಂಧಿತ ಆರೋಪಿ. ಬಂಧಿತರ ಸಂಖ್ಯೆ ಏಳಕ್ಕೆ ಏರಿದೆ. ಈ ಹಿಂದೆ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಘಟಪ್ರಭಾ ಠಾಣೆ ಪೊಲೀಸರು ಕೇವಲ 24ಗಂಟೆಯಲ್ಲಿ ಪ್ರಕರಣವನ್ನು ಭೇದಿಸಿದ್ದು, ಅಪಹರಣವಾಗಿದ್ದ ಉದ್ಯಮಿಯನ್ನು ರಕ್ಷಿಸಿದ್ದಾರೆ.
ಫೆ.14ರಂದು ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ಉದ್ಯಮಿ ಬಸವರಾಜ ಅಂಬಿ ಅವರನ್ನು ಆರೋಪಿಗಳು ಕಿಡ್ನ್ಯಾಪ್ ಮಾಡಿದ್ದರು. ಕಿಡ್ನ್ಯಾಪ್ ಮಾಡಿ 5 ಕೋಟಿ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಪ್ರಕರಣ ಸಂಬಂಧ ಪೊಲೀಸರು 6 ಜನರನ್ನು ಬಂಧಿಸಿದ್ದರು.
ತನಿಖೆ ವೇಳೆ ಕಿಡ್ನ್ಯಾಪ್‌ನ ಮಾಸ್ಟರ್ ಪ್ಲ್ಯಾನ್ ಮಾಡಿರುವುದು ಕಿಂಗ್‌ಪಿನ್ ಮಂಜುಳಾ ಎಂಬ ವಿಚಾರ ತಿಳಿದಿದೆ. ಮಂಜುಳಾ ಮಗ ಈಶ್ವರ ರಾಮಗನಟ್ಟಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ವಿಚಾರ ಬಹಿರಂಗವಾಗಿದೆ.
ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ಬಸವರಾಜ ಅಂಬಿ (48ವರ್ಷ) ಅವರು ಫೆಬ್ರವರಿ 14ರಂದು ರಾತ್ರಿ 11ಗಂಟೆ ಸುಮಾರಿಗೆ ಮನೆಗೆ ಬರುತ್ತಿರುವಾಗ ಅಪಹರಣ ಮಾಡಲಾಗಿತ್ತು. ಮರುದಿನ ಫೆಬ್ರವರಿ 15 ರಂದು ಬಸವರಾಜ ಅಂಬಿ ಅವರ ಪತ್ನಿ ಶೋಭಾಗೆ ಕರೆ ಮಾಡಿದ್ದ ಅಪಹರಣಕಾರರು ಐದು ಕೋಟಿ ಹಣ ನೀಡಿ ನಿನ್ನ ಬಿಡಿಸಿಕೊಂಡು ಹೋಗುವಂತೆ ಹೇಳಿದ್ದರು.
ಮಗ ಮತ್ತು ಸ್ನೇಹಿತರು, ಮಂಜುಳಾ ನೀಡಿದ ಪ್ಲ್ಯಾನ್ ಮೇಲೆ ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿರುವುದು ಬೆಳಕಿಗೆ ಬಂದಿದೆ. ತನಿಖೆ ಸಂದರ್ಭದಲ್ಲಿ ಸಿಕ್ಕ ತಾಂತ್ರಿಕ ಸಾಕ್ಷಿ ಸೇರಿ ಆರೋಪಿಗಳ ಹೇಳಿಕೆ ಆಧರಿಸಿ ಮಂಜುಳಾನನ್ನ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ 7 ಜನ ಆರೋಪಿಗಳನ್ನ ಘಟಪ್ರಭಾ ಪೊಲೀಸರು ಬಂಧಿಸಿದ್ದಾರೆ.