

ಡೈಲಿ ವಾರ್ತೆ: 03/ಮಾರ್ಚ್ /2025


ಕುಂದಾಪುರ| ಕಡು ಬೇಸಿಗೆಯಲ್ಲೂ ಉಪ್ಪು ನೀರು ನುಗ್ಗಿ ಹೊಳೆಯಂತಾಗಿರುವ ಫಲವತ್ತಾದ ಕೃಷಿ,ಗದ್ದೆಗಳು – ಕೃಷಿಕರು ಕಂಗಾಲು!

ಕುಂದಾಪುರ| ವಡೇರಹೋಬಳಿ ಗ್ರಾಮದ ಟಿಟಿ ರಸ್ತೆ ಆರಾಮಚನ್ನಕೇಶ್ವರ ದೇವಸ್ಥಾನದ ಹಿಂಬದಿಯಲ್ಲಿ ಇರುವ 80 ರಿಂದ 100 ಎಕರೆ ಫಲವತ್ತಾದ ಕೃಷಿ ಭೂಮಿಗೆ ಉಪ್ಪು ನೀರು ಒಂದು ಶಾಪವಾಗಿ ಪರಿಣಮಿಸಿದೆ.
ಪ್ರತಿ ವರ್ಷ ಜನವರಿ, ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಗಂಗಾವಳಿ ಹೊಳೆಯ ಹಿನ್ನೀರು ಮಾರ್ಗದಲ್ಲಿ ಸಮುದ್ರದ ಉಪ್ಪು ನೀರು ಕೃಷಿಗದ್ದೆಗಳಿಗೆ ನುಗ್ಗಿ ಕೃಷಿಕರಿಗೆ ಕೃಷಿ ಮಾಡಲು ತೀವ್ರ ಹಿನ್ನಡೆಯಾಗುತ್ತಿದೆ.

ಈ ಬಗ್ಗೆ ಕಳೆದ ಹಲವಾರು ವರ್ಷಗಳಿಂದ ಸ್ಥಳೀಯ ಪುರಸಭೆ ಹಾಗೂ ಸಣ್ಣ ನೀರಾವರಿ ಇಲಾಖೆಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನ ಆಗಿರುವುದಿಲ್ಲ, ಈ ರೀತಿ ಸಮಸ್ಯೆ ಯಿಂದ ಕೃಷಿಕರು ಕಂಗಾಲಾಗಿದ್ದಾರೆ.

ಉಪ್ಪು ನೀರು ತಡೆಗೋಡೆ ಅಥವಾ ರಿಂಗ್ ರೋಡ್ ಮುಂದುವರಿಸದೆ ಇದ್ದಲ್ಲಿ ಕೃಷಿ ಗದ್ದೆಗಳು ಉಪ್ಪು ನೀರಿನ ಹೊಳೆ ಆಗುವುದರಲ್ಲಿ ಸಂಶಯವಿಲ್ಲ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕಾಗಿ ಈ ಭಾಗದ ನೊಂದ ಕೃಷಿಕರು ಮನವಿ ಮಾಡಿದ್ದಾರೆ. ಕೂಡಲೇ ಪುರಸಭೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಿದ್ದಾರೆ.