ಡೈಲಿ ವಾರ್ತೆ: 04/ಮಾರ್ಚ್ /2025

ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥಾಪಕರ ದಿನಾಚರಣೆ: ಮಕ್ಕಳಲ್ಲಿ ಶಿಸ್ತು ಮೂಡಿಸಲು ಸ್ಕೌಟ್ಸ್ & ಗೈಡ್ಸ್ ಸಹಕಾರಿ – ಡಾ. ರಮೇಶ್ ಶೆಟ್ಟಿ

ಕುಂದಾಪುರ| ” ಸ್ವಾತಂತ್ರ್ಯ ಪೂರ್ವದಲ್ಲಿಯೇ ಬ್ರಿಟಿಷ್ ನಿವೃತ್ತ ಅಧಿಕಾರಿ ಪೋವೆಲ್ ರಿಂದ ಸ್ಥಾಪಿತವಾದ ಸ್ಕೌಟ್ಸ್ ಅಂಡ್ ಗೈಡ್ಸ್ ಆಂದೋಲನ ಇಂದು ಜಗತ್ತಿನಾದ್ಯಂತ ಪಸರಿಸಿ ಯುವ ಸಮುದಾಯವನ್ನು ಅದರಲ್ಲಿಯೂ ವಿಶೇಷವಾಗಿ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ದೈಹಿಕವಾಗಿ ಬೌದ್ಧಿಕವಾಗಿ ಸದೃಢವಾಗಿಸಿ ಉತ್ತಮ ಪ್ರಜೆಗಳಾಗಿ ರೂಪಿಸಲು ಸಹಕಾರಿಯಾಗಿದೆ. ಇಂದು ಭಾರತದ ಬಹುಪಾಲು ರಾಜ್ಯಗಳಲ್ಲಿ ತರಬೇತಿ ನಡೆಯುತ್ತಿದ್ದು ಬಹುಪಾಲು ಶಾಲೆಗಳಲ್ಲಿ ವಿದ್ಯಾರ್ಥಿಗಳು ಬಹಳ ಉತ್ಸುಕತೆಯಿಂದ ಪಾಲ್ಗೊಂಡು ಉತ್ತಮ ಶಿಸ್ತು ನಡತೆಗಳನ್ನು ಕಲಿತು ಪಠ್ಯ ಮತ್ತು ಪಠ್ಯೇತರ ವಿಭಾಗದಲ್ಲೂ ಉತ್ತಮ ಸಾಧನೆ ತೋರಿಸುತ್ತಿದ್ದಾರೆ.

ಮಕ್ಕಳಿಗೆ ಪ್ರಾಥಮಿಕ ಶಾಲಾ ಹಂತದಲ್ಲಿಯೇ ಸ್ಕೌಟ್ಸ್ ಅಂಡ್ ಗೈಡ್ಸ್ ಪರಿಚಯ ಮಾಡುವುದರಿಂದ ಉತ್ತಮ ಶಿಸ್ತು, ಗುಣ ನಡತೆಗಳನ್ನು ಜೀವನದುದ್ದಕ್ಕೂ ರೂಡಿಸಿಕೊಳ್ಳಲು ಸಹಕಾರಿಯಾಗುತ್ತದೆ” ಎಂದು ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಆಡಳಿತ ಮಂಡಳಿ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಹೇಳಿದರು. ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥಾಪಕರ ದಿನಾಚರಣೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮತ್ತು ಸರ್ವಧರ್ಮ ಪ್ರಾರ್ಥನೆಯನ್ನು ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳು ಸಾಹಸದ ಕಸರತ್ತುಗಳನ್ನು, ಬೆಂಕಿ ಬಳಸದೆ ಮತ್ತು ಬೆಂಕಿ ಬಳಸಿ ವಿವಿಧ ತಿಂಡಿ ತಿನಿಸು, ಖಾದ್ಯಗಳನ್ನು ತಯಾರಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ್ ಕೆ., ವಿದ್ಯಾರ್ಥಿ ಪೋಷಕರಾದ ರಾಜಣ್ಣ, ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದ ಶಿಕ್ಷಕರಾದ ಗಿರೀಶ್, ಸೂರ್ಯ, ಜಯಲತಾ ಮತ್ತು ಮಕ್ಕಳು ಉಪಸ್ಥಿತರಿದ್ದರು. ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದ ಶಿಕ್ಷಕ ಹರೀಶ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸ್ಕೌಟ್ಸ್ ಅಂಡ್ ಗೈಡ್ಸ್ ಮಹತ್ವವನ್ನು ವಿವರಿಸಿದರು. ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಸಹ ಶಿಕ್ಷಕಿ ಪವಿತ್ರ ವಂದಿಸಿದರು , ಕನ್ನಡ ಶಿಕ್ಷಕ ಸಂತೋಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.