

ಡೈಲಿ ವಾರ್ತೆ: 04/ಮಾರ್ಚ್ /2025


ಗೃಹಲಕ್ಷ್ಮಿಅಭಾದಿತ, ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರುವ ತನಕ ಗ್ಯಾರಂಟಿ ರದ್ದಾಗದು: ಲಕ್ಷ್ಮಿ ಹೆಬ್ಬಾಳ್ಕರ್

ಬೆಂಗಳೂರು: “ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಅಭಾದಿತವಾಗಿದ್ದು, ನಿರಂತರವಾಗಿರುತ್ತದೆ. ಕಾಂಗ್ರೆಸ್ ಪಕ್ಷದ ಸರಕಾರ ಅಧಿಕಾರದಲ್ಲಿರುವ ತನಕ ಯೋಜನೆ ರದ್ದಾಗುವುದಿಲ್ಲ” ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ “ಗ್ಯಾರಂಟಿ” ಭರವಸೆ ನೀಡಿದ್ದಾರೆ.
ಅಪಘಾತದಲ್ಲಿ ಗಾಯಗೊಂಡು ಚೇತರಿಸಿಕೊಂಡ ಬಳಿಕ ರಾಜ್ಯ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಭಾಗವಹಿಸಲು ಬೆಳಗಾವಿಯಿಂದ ರಾಜಧಾನಿ ಬೆಂಗಳೂರಿಗೆ ಆಗಮಿಸಿರುವ ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
“ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಇರುವುದೇ ಬಡ ವರ್ಗದವರಿಗಾಗಿ. ಪಕ್ಷಾತೀತವಾಗಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕುಟುಂಬದ ಯಜಮಾನಿಯರ ಖಾತೆಗೆ ಹಾಕಲಾಗುತ್ತಿದೆ. ಚುನಾವಣೆ ನಡೆಯುವ ಕ್ಷೇತ್ರಗಳಿಗೆ ಮಾತ್ರ ಗೃಹಲಕ್ಷ್ಮಿ ಹಣ ಹಾಕಲಾಗುತ್ತದೆ ಎನ್ನುವ ಆರೋಪ ಶುದ್ಧ ಸುಳ್ಳು. ಇದು ಆಧಾರರಹಿತ” ಎಂದು ಹೇಳಿದರು.
“ಜಿಎಸ್ಟಿ, ಜಿಎಸ್ಟಿಯೇತರ, ಆದಾಯ ತೆರಿಗೆ ಹೀಗೆ ಫಲಾನುಭವಿಗಳನ್ನು ವಿಂಗಡಿಸಲಾಗಿದೆ. ಈಗಾಗಲೇ ನವೆಂಬರ್, ಡಿಸೆಂಬರ್ ತಿಂಗಳ ಬಿಲ್ ಆಗಿದ್ದು, ಎಲ್ಲಾ ಫಲಾನುಭವಿಗಳಿಗೂ ಹಣ ಸಂದಾಯವಾಗಲಿದೆ. ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆ ಚುನಾವಣೆಗೋಸ್ಕರ ಮಾಡಿರುವ ಯೋಜನೆಯಲ್ಲ. ಚುನಾವಣೆ ಮುಗಿದ ಬಳಿಕವೂ ಮುಂದುವರಿದಿವೆ” ಎಂದು ತಿಳಿಸಿದರು.