ಡೈಲಿ ವಾರ್ತೆ: 09/ಮಾರ್ಚ್ /2025

ಮಂಗಳೂರು| ವಕ್ಫ್ ತಿದ್ದುಪಡಿ
ಮಸೂದೆ ವಿರೋಧಿಸಿ ಉಲಮಾಗಳಿಂದ ಬೃಹತ್ ಕಾಲ್ನಡಿಗೆ ಜಾಥಾ

ಮಂಗಳೂರು: ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಂಡಿಸಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಕರ್ನಾಟಕ ಉಲಮಾ ಒಕ್ಕೂಟದ ವತಿಯಿಂದ ಮಾ. 9 ರಂದು ಭಾನುವಾರ ಮಂಗಳೂರಿನಲ್ಲಿ ಬೃಹತ್ ಕಾಲ್ನಡಿಗೆ ಜಾಥಾ ನಡೆಯಿತು.

ನಗರದ ಹಂಪನಕಟ್ಟೆಯ ಮಿಲಾಗ್ರಿಸ್‌ನಿಂದ ಆರಂಭವಾದ ಜಾಥಾವು ಕ್ಲಾಕ್ ಟವರ್‌ನಲ್ಲಿ ಸಮಾರೋಪಗೊಂಡಿತು.

ಜಾಥಾದಲ್ಲಿ ಸಾವಿರಾರು ಮುಸ್ಲಿಂ ಸಮುದಾಯದವರು ಭಾಗವಹಿಸಿದ್ದರು. ಕೇಂದ್ರ ಸರ್ಕಾರವು ಮುಸ್ಲಿಂ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ವಕ್ಫ್ ತಿದ್ದುಪಡಿ ಮಸೂದೆಯು ಮುಸ್ಲಿಂ ಸಮುದಾಯದಲ್ಲಿ ಅಸುರಕ್ಷತೆಯನ್ನು ಮೂಡಿಸುವ ಮತ್ತು ಅವರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ಒದಗಿಸಿರುವ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಜಾಥಾದ ಆರಂಭದಲ್ಲಿ ಸಯ್ಯಿದ್ ಅಮೀರ್ ತಂಙಳ್ ಕಿನ್ಯ ಪ್ರಾರ್ಥನೆ ನೆರವೇರಿಸಿದರು.
ಖಾಝಿ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಜಾಥಾ ಉದ್ಘಾಟಿಸಿದರು. ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ ಸ್ವಾಗತ ಭಾಷಣ ಮಾಡಿದರು.

ಕ್ಲಾಕ್ ಟವರ್‌ನಲ್ಲಿ ನಡೆದ ಜಾಥಾ ಸಮಾರೋಪದಲ್ಲಿ ಕರ್ನಾಟಕ ಉಲಮಾ ಒಕ್ಕೂಟದ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ ಎಂ ಉಸ್ಮಾನುಲ್ ಫೈಝಿ ಉದ್ಘಾಟನಾ ಭಾಷಣ ಮಾಡಿದರು.
ಕರ್ನಾಟಕ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಶಾಫಿ ಸಅದಿ ಪ್ರಾಸ್ತಾವಿಕ ಭಾಷಣ ಮಾಡಿದರು. ಡಾ. ಎಮ್ಮೆಸ್ಸೆಂ. ಅಬ್ದುಲ್ ರಶೀದ್ ಝೈನೀ ಮತ್ತು ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಸಂದೇಶ ಭಾಷಣ ಮಾಡಿದರು.
ರಫೀಕ್ ಅಹ್ಮದ್ ಹುದವಿ ಕೋಲಾರ ಸ್ವಾಗತ ಭಾಷಣ ಮಾಡಿದರು. ಸಿದ್ದೀಖ್ ಕೆ ಎಂ ಮೊಂಟುಗೋಳಿ ಧನ್ಯವಾದ ಅರ್ಪಿಸಿದರು.