


ಡೈಲಿ ವಾರ್ತೆ: 12/ಮಾರ್ಚ್ /2025


ದಕ್ಷಿಣ ಕನ್ನಡ| ಪುತ್ತೂರು, ಕಡಬ, ಸುಳ್ಯ ಸಹಿತ ಹಲವೆಡೆ ಭಾರೀ ಮಳೆ

ಪುತ್ತೂರು: ಬಿಸಿಲ ಧಗೆಯಿಂದ ಬೇಸತ್ತು ಹೋಗಿದ್ದ ಕರಾವಳಿಯಲ್ಲಿ ಕೊನೆಗೂ ವರ್ಷಧಾರೆಯಾಗಿದ್ದು, ಇಂದು ಪುತ್ತೂರು, ಕಡಬ, ಸುಳ್ಯ ತಾಲೂಕಿನ ಹಲವೆಡೆ ಉತ್ತಮ ಮಳೆಯಾಗಿದೆ.
ಕಡಬ, ಸುಬ್ರಹ್ಮಣ್ಯ, ಸುಳ್ಯ, ಪುತ್ತೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಬುಧವಾರ ಸಂಜೆ ಗಾಳಿ ಮಳೆಯಾಗಿದೆ .ಶಾಲಾ ಕಾಲೇಜು ಬಿಡುವ ಸಮಯದಲ್ಲೇ ಮಳೆಯಾದ ಕಾರಣ ವಿದ್ಯಾರ್ಥಿಗಳು ಕೊಡೆಯಿಲ್ಲದೆ ಮಳೆಯಲ್ಲಿ ನೆನೆದರು.
ರಾಜ್ಯದಲ್ಲಿ ತಾಪಮಾನ ಏರಿಕೆ ನಡುವೆಯೇ ಹವಾಮಾನ ಇಲಾಖೆಯ ಮಳೆಯ ಮುನ್ಸೂಚನೆ ನೀಡಿತ್ತು. ರಾಜ್ಯದ ಹಲವು ಭಾಗಗಳಲ್ಲಿ ಮಾರ್ಚ್ 14ರವರೆಗೆ ಸುಡುವ ಬೇಸಿಗೆ ನಡುವೆಯೂ ಮುಂಗಾರು ಪೂರ್ವ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮಾರ್ಚ್ 10ರಿಂದ ಪೂರ್ವ ಮುಂಗಾರು ಮಾರುತ ಚುರುಕುಗೊಳ್ಳುವ ಸಾಧ್ಯತೆ ಇದ್ದು, ಮಾರ್ಚ್14ರವರೆಗೆ ಮಳೆಯಾಗಲಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಭಾಗಗಳು, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು & ಚಾಮರಾಜನಗರ ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.