ಡೈಲಿ ವಾರ್ತೆ: 16/ಮಾರ್ಚ್ /2025

ಕಾರು ಮರಕ್ಕೆ ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ಸಾವು, ಮೂವರಿಗೆ ಗಾಯ!

ಚಾಮರಾಜನಗರ: ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದು ಸ್ಥಳದಲ್ಲೇ ಇಬ್ಬರು ಯುವಕರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಾ. 16 ರಂದು ಬೆಳಗಿನ ಜಾವ ಚಾಮರಾಜನಗರ ತಾಲೂಕಿನ ಪುಣಜನೂರು ಚೆಕ್‌ಪೋಸ್ಟ್ ಬಳಿ ನಡೆದಿದೆ.

ಮೃತರನ್ನು ಮೈಸೂರಿನ ರಮಾಬಾಯಿ ನಗರದ ನಂದನ್(24) ಹಾಗೂ ಜೀವನ್(24) ಎಂದು ಗುರುತಿಸಲಾಗಿದೆ.
ಸುನೀಲ್, ಧನುಷ್ ಮತ್ತು ಶಶಾಂಕ್ ತೀವ್ರವಾಗಿ ಗಾಯಗೊಂಡಿದ್ದಾರೆ.

ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬರುತ್ತಿದ್ದಾಗ ಚೆಕ್‌ಪೋಸ್ಟ್ ಸಮೀಪ ಮರಕ್ಕೆ ಡಿಕ್ಕಿಯಾಗಿ ಅವಘಡ ಉಂಟಾಗಿದೆ. ಎಲ್ಲರೂ ವಿದ್ಯಾರ್ಥಿಗಳಾಗಿದ್ದು, ಮದುವೆಗೆ ಬಂದಿದ್ದರು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಚಾಮರಾಜನಗರ ಪೂರ್ವ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.