ಡೈಲಿ ವಾರ್ತೆ: 17/ಮಾರ್ಚ್ /2025

ಅಂಕೋಲಾ| ಬಸ್‌ನಲ್ಲಿ ಪ್ರಯಾಣಸುತ್ತಿರುವಾಗಲೇ 8 ವರ್ಷದ ಬಾಲಕಿ ಸಾವು: ಪ್ರಕರಣ ದಾಖಲು

ವರದಿ: ವಿದ್ಯಾಧರ ಮೊರಬಾ

ಅಂಕೋಲಾ: ತಾಯಿಯೊಂದಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 8 ವರ್ಷ ಬಾಲಕಿ ಯೋರ್ವಳು ಅನಾರೋಗ್ಯದಿಂದ ಸಾವನ್ನಪ್ಪಿದ ಘಟನೆ ಮಾ. 17 ರಂದು ಸೋಮವಾರ ಅಂಕೋಲಾದ ಅವರ್ಸಾ ಸಮೀಪ ಸಂಭವಿಸಿದೆ.

ಮೃತ ಪಟ್ಟ ಬಾಲಕಿ ಕಾರವಾರ ತಾಲೂಕಿನ ಮಾಜಾಳಿ ಗ್ರಾಮದ ಸ್ನೇಹಾ ಸಾಗರ ಕೋಟಾರಕರ(8) ಎಂದು ಗುರುತಿಸಲಾಗಿದೆ.

ಈಕೆಗೆ ನೆಗಡಿ ಹಾಗೂ ಇನ್ನಿತರ ಸಣ್ಣಪುಟ್ಟ ಆರೋಗ್ಯ ಸಮಸ್ಯೆಯಿರುವುದರಿಂದ ಮಂಗಳೂರಿನಲ್ಲಿಯೂ ಚಿಕಿತ್ಸೆ ಪಡೆದಿದ್ದರು. ಹಾಗೇ ಮತ್ತೆ ಗಂಟಲಿನಲ್ಲಿ ಕಫ ಹೆಚ್ಚಿದ್ದರಿಂದಾಗಿ ಕುಮಟಾ ಆಸ್ಪತ್ರೆಗೆ ಕಾಣಿಸಲು ಆಕೆಯ ತಾಯಿಯು ತನ್ನ ಸಂಬಂಧಿಯೊಂದಿಗೆ ಕಾರವಾರ ದಿಂದ ಕುಮಟಾಕ್ಕೆ ಮಗಳನ್ನು ಬಸ್‌ನಲ್ಲಿ ತೆರಳುತ್ತಿದ್ದರು. ಬಸ್ ಹತ್ತುವ ಸಮಯದಲ್ಲಿ ಆಕೆಯೇ ನಡೆದುಕೊಂಡು ಬಂದಿದ್ದಳು. ಆದರೆ ಬಸ್‌ನಲ್ಲಿ ಬರುತ್ತಿರುವಾಗ ಅವರ್ಸಾ ಸಮೀಪ ವಾಂತಿ ಮಾಡಿ ನಿತ್ರಾಣವಾಗಿರುವುದನ್ನು ಗಮನಿಸಿದ ಬಸ್‌ನ ಚಾಲಕ ಮತ್ತು ನಿರ್ವಾಹಕ ಕರ್ತವ್ಯದಲ್ಲಿದ್ದ ಚಂದ್ರಶೇಖರ ಅವರು ಮಾನವೀಯ ನೆಲೆಯಲ್ಲಿ ಬಸ್‌ನ್ನು ಹಟ್ಟಿಕೇರಿ ಪ್ರಾಥಮಿಕ ಕೇಂದ್ರ ತೆರಳಿ ಬಾಲಕಿಯ ಚಿಕಿತ್ಸೆಗೆ ನೆರವಾದರು.
ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯ ಡಾ.ಜುಬೇರ ಖಾನ್ ಅವರು ತಮ್ಮ ಕಾರ್‌ನಲ್ಲಿ ಅಂಕೋಲಾ ತಾಲೂಕ ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದರು. ಅಷ್ಟರೊಗಳಗಾಗಿ ಆಸ್ಪತ್ರೆಗೆ ಬರುವ ವೇಳೆಗಾಗಲೇ ಆಕೆ ಸಾವನ್ನಪ್ಪಿರುವುದು ಖಚಿತಪಡಿಸಿದರು.

ಸಾಗರ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು ಅವರಲ್ಲಿ ಸ್ನೇಹಾ ಪ್ರಥಮ ಪುತ್ರಿಯಾಗಿದ್ದು, ಈಕೆ ಎರಡನೇ ತರಗತಿಯಲ್ಲಿ ಓದುತ್ತಿದ್ದಳು. ಈಕೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅಂಕೋಲಾದ ಪೂಜೆಗೇರಿಯ ಅಜ್ಜಿಯ ಮನೆಯವರು ಆಸ್ಪತ್ರೆಗೆ ದೌಡಾಯಿಸಿದರು. ತಾಯಿಯ ದುಃಖ, ಕಿರುಚಾಟ ಎಂತವರ ಕಣ್ಣಲ್ಲಾದರೂ ನೀರು ತರಿಸುವಂತಿತ್ತು. ಆಸ್ಪತ್ರೆಗೆ ತಾಲೂಕು ಆರೋಗ್ಯ ಅಧಿಕಾರಿ ಡಾ. ಜಗದೀಶ ನಾಯ್ಕ, ಡಾ. ಅನುಪಮಾ ನಾಯ್ಕ, ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ, ಪಿಎಸ್‌ಐ ಸುನೀಲ ಇತರರು ಭೇಟಿ ನೀಡಿದರು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.