


ಡೈಲಿ ವಾರ್ತೆ: 21/ಮಾರ್ಚ್ /2025


ಹೆತ್ತ ತಾಯಿಯ ಸಾವಿನ ನೋವಿನಲ್ಲೂ ಬಂದು SSLC ಪರೀಕ್ಷೆ ಬರೆದ ವಿದ್ಯಾರ್ಥಿ..!

ಕೊಪ್ಪಳ: ಕೊಪ್ಪಳದಲ್ಲಿ ವಿದ್ಯಾರ್ಥಿಯೋರ್ವ ತಾಯಿಯನ್ನು ಕಳೆದುಕೊಂಡ ನೋವಿನಲ್ಲೂ ಇಂದು (ಮಾರ್ಚ್ 21) ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾನೆ.
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಹೇರೂರು ಗ್ರಾಮದ ಅಡಿವಯ್ಯ ಸ್ವಾಮಿ, ತಾಯಿ ಸಾವಿನ ದುಃಖದಲ್ಲೂ ಹೋಗಿ ಪರೀಕ್ಷೆ ಬರೆದಿದ್ದಾನೆ. ಬಳಿಕ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾನೆ.
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಹೇರೂರಿನ ಅಡಿವಯ್ಯ ಸ್ವಾಮಿ, ಕೇಸರಹಟ್ಟಿಯ ಸ್ವಾಮಿ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಪರೀಕ್ಷೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದ.
ಇಂದು (ಮಾರ್ಚ್ 21) ಬೆಳಗ್ಗೆ ಇನ್ನೇನು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಬೇಕು ಎನ್ನುವರಷ್ಟರಲ್ಲಿ ಅಡಿವೆಯ್ಯ ಸ್ವಾಮಿ ತಾಯಿ ವಿಜಯಲಕ್ಷ್ಮಿ ಸಿದ್ದಯ್ಯಸ್ವಾಮಿ (38) ಶುಕ್ರವಾರ ಬೆಳಗಿನ ಸಮಯದಲ್ಲಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇತ್ತ ಪರೀಕ್ಷೆಗೆ ಸಿದ್ಧವಾಗಿದ್ದ ಅಡಿವೆಯ್ಯ ಸ್ವಾಮಿಗೆ ತಾಯಿ ನಿಧನದ ಸುದ್ದಿ ಬರಸಿಡಿಲಿನಂತೆ ಬಂದು ಅಪ್ಪಳಿಸಿದೆ. ಆದರೂ ಸಹ ತಾಯಿಯ ಅಗಲಿಕೆಯ ಸುದ್ದಿಯ ಮಧ್ಯೆಯೂ ಧೃತಿಗೆಡದ ವಿದ್ಯಾರ್ಥಿ, ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆದಿದ್ದಾನೆ.
ತಾಯಿಯನ್ನು ಕಳೆದುಕೊಂಡ ನೋವಿನಲ್ಲಿದ್ದ ವಿದ್ಯಾರ್ಥಿ ಅಡಿವೆಯ್ಯ ಸ್ವಾಮಿ ಮನೆಗೆ ಶಿಕ್ಷಕರು ಭೇಟಿ ಸಾಂತ್ವಾನ ಹೇಳಿದರು. ಬಳಿಕ ಅಡಿವೆಯ್ಯ ಸ್ವಾಮಿಗೆ ಧೈರ್ಯ ತುಂಬಿ ಪರೀಕ್ಷಾ ಕೇಂದ್ರದವರೆಗೆ ಕರೆದೊಯ್ಯಲು ನೆರವಾದರು. ಇನ್ನು ಮನೆಯಲ್ಲಿ ತಾಯಿ ಸಾವನ್ನಪ್ಪಿದ್ದರೆ ಇತ್ತ ಪುತ್ರ ಅಡಿವೆಯ್ಯ ಸ್ವಾಮಿ ತಾಯಿ ಕಳೆದುಕೊಂಡ ನೋವಿನಲ್ಲಿ ಪರೀಕ್ಷೆ ಬರೆದಿದ್ದಾನೆ. ಬಳಿಕ ಅಡಿವೆಯ್ಯ ಸ್ವಾಮಿ ತಾಯಿಯ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿ ವಿಧಿವಿಧಾನ ನೆರವೇರಿಸಿದ್ದಾನೆ.