ಡೈಲಿ ವಾರ್ತೆ: 29/ಮಾರ್ಚ್ /2025

ಬೆಲ್ಲ ಸೆವಿಸುವುದರಿಂದ ಆರೋಗ್ಯಕ್ಕೆ ಪ್ರಯೋಜನಗಳು

ಬೆಲ್ಲ ಒಂದು ನೈಸರ್ಗಿಕ ಸಿಹಿ ಪದಾರ್ಥವಾಗಿದ್ದು, ಇದನ್ನು ಕಬ್ಬಿನಿಂದ ತಯಾರಿಸಲಾಗುತ್ತದೆ. ಶತಮಾನಗಳಿಂದ ಭಾರತೀಯ ಸಂಸ್ಕೃತಿಯಲ್ಲಿ ಔಷಧೀಯ ಹಾಗೂ ಪೌಷ್ಠಿಕ ಗುಣಗಳಿಗಾಗಿ ಇದನ್ನು ಬಳಸಲಾಗುತ್ತಿದೆ.

ನಮ್ಮ ದೈನಂದಿನ ದಿನಗಳಲ್ಲಿ ನಾವು ಸೇವಿಸುವ ಆಹಾರದೊಂದಿಗೆ ಬೆಲ್ಲ ಸೇರಿಸಿದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಮಾತ್ರವಲ್ಲದೇ ಬೆಲ್ಲ ನಮ್ಮ ಆಹಾರಕ್ರಮಕ್ಕೆ ಅತ್ಯಗತ್ಯವಾಗಿರುವ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಕಾಫಿ, ಟೀ ಅಥವಾ ಇತರ ಸಿಹಿ ಪದಾರ್ಥಗಳಿಗೆ ಸಕ್ಕರೆ ಬದಲು ಬೆಲ್ಲ ಬಳಸಿದರೆ ಈ ಪ್ರಮುಖ ಆರೋಗ್ಯಕರ ಗುಣಗಳನ್ನು ಪಡೆಯಬಹುದು:

ಬೆಲ್ಲವನ್ನು ಪ್ರತಿದಿನದ ಆಹಾರದಲ್ಲಿ ಸೇರಿಸಬೇಕಾದ 6 ಪ್ರಮುಖ ಕಾರಣಗಳು ಇಲ್ಲಿವೆ:

ಪೋಷಕಾಂಶಗಳಿಂದ ತುಂಬಿದೆ:
ಬರೇ ಕ್ಯಾಲೋರಿಗಳಿಂದ ಕೂಡಿದ ಬೆಲ್ಲದಲ್ಲಿ ಕಬ್ಬಿಣ, ಮೆನ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಪ್ರಮುಖ ಖನಿಜಗಳು ಹೇರಳವಾಗಿವೆ. ನಮ್ಮ ದೇಹದಲ್ಲಿ ಪೌಷ್ಠಿಕಾಂಶವನ್ನು ಕಡಿಮೆ ಮಾಡದೆ ತಮ್ಮ ಆಹಾರಕ್ಕೆ ಸಿಹಿಯನ್ನು ಸೇರಿಸಲು ಬಯಸುವ ಜನರಿಗೆ, ಬೆಲ್ಲ ಒಂದು ಆರೋಗ್ಯಕರ ಆಯ್ಕೆಯಾಗಿದೆ.

ರೋಗನಿರೋಧಕ ಶಕ್ತಿ ಹೆಚ್ಚಿಸಲು:
ಪ್ರಸ್ತುತ ದಿನಗಳಲ್ಲಿ ಹವಾಮಾನ ಬದಲಾವಣೆಗಳು ಮತ್ತು ಮಾಲಿನ್ಯದಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಬೆಲ್ಲ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಲ್ಲದಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಾಂಶಗಳು ಇದ್ದು ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ವಿವಿಧ ರೋಗಗಳು ಮತ್ತು ಸೋಂಕುಗಳು ಬರದಂತೆ ತಡೆಯುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ:
ಭಾರತೀಯ ಮನೆಗಳಲ್ಲಿ ಊಟದ ನಂತರ ಬೆಲ್ಲ ಸೇವಿಸುವುದು ಸಾಮಾನ್ಯ. ಬೆಲ್ಲ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಇದು ಜೀರ್ಣಕ್ರಿಯಾ ಎಂಜೈಮ್ ಗಳ ಉತ್ಪಾದನೆಯನ್ನು ಹೆಚ್ಚಿಸಿ ಆಹಾರವನ್ನು ಸರಿಯಾಗಿ ಜೀರ್ಣಗೊಳಿಸಲು ಸಹಾಯ ಮಾಡುತ್ತದೆ. ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಮಾತ್ರವಲ್ಲದೇ ಅಜೀರ್ಣ, ಹೊಟ್ಟೆ ಉಬ್ಬರ ಸಮಸ್ಯೆಯನ್ನು ಕೂಡಾ ನಿವಾರಿಸಬಹುದು. ಪೊಟ್ಯಾಷಿಯಂ ನಿಂದ ಸಮೃದ್ಧವಾಗಿರುವ ಬೆಲ್ಲ, ತೂಕ ಕಡಿಮೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ನೈಸರ್ಗಿಕ ಡಿಟಾಕ್ಸಿಫೈಯರ್:
ಬೆಲ್ಲ ಯಕೃತ್ತಿನ ಶುದ್ದೀಕರಣ ಮತ್ತು ದೇಹದಲ್ಲಿರುವ ವಿಷಕಾರಿ ಅಂಶ ತೊಡೆದು ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಾತ್ರವಲ್ಲದೆ ಇದು ರಕ್ತ ಶುದ್ದೀಕರಣಕ್ಕೆ ಸಹಾಯ ಮಾಡುತ್ತದೆ. ಇದು ಆರೋಗ್ಯಕರ ತ್ವಚೆಗೂ ಸಹಕಾರಿಯಾಗಿದೆ. ನೈಸರ್ಗಿಕವಾಗಿ ದೇಹವನ್ನು ಶುದ್ದೀಕರಿಸಲು ಸಂಸ್ಕರಿಸಿದ ಸಿಹಿತಿಂಡಿಗಳ ಬದಲಾಗಿ ಬೆಲ್ಲವನ್ನು ಆಹಾರದೊಂದಿಗೆ ಬಳಸಿ.

ರಕ್ತಹೀನತೆಯನ್ನು ತಡೆಯುತ್ತದೆ:
ಬೆಲ್ಲದಲ್ಲಿ ಮೆಗ್ನಿಷಿಯಂ, ಪೊಟಾಷಿಯಂ, ಕ್ಯಾಲ್ಸಿಯಂ, ಮ್ಯಾಂಗನೀಸ್, ನಂತಹ ಅಂಶ ಹೆಚ್ಚಾಗಿದ್ದು ಇದು ರಕ್ತಹೀನತೆ ಬರದಂತೆ ತಡೆಯುತ್ತದೆ. ತಾಳೆ ಬೆಲ್ಲ ಕಬ್ಬಿಣಾಂಶದಿಂದ ಸಮೃದ್ಧವಾಗಿದ್ದು ಇದು ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚಿಸುತ್ತದೆ ಮತ್ತು ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತಹೀನತೆಯನ್ನು ಗುಣಪಡಿಸುತ್ತದೆ.

ಮಹಿಳೆಯರು ಸಾಮಾನ್ಯವಾಗಿ ಎದುರಿಸುವ ಆರೋಗ್ಯ ಸಮಸ್ಯೆ ಎಂದರೆ ಕಬ್ಬಿಣಾಂಶದ ಕೊರತೆ. ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಬೆಲ್ಲ ಉತ್ತಮ ಆಹಾರವಾಗಿದೆ. ಏಕೆಂದರೆ ಇದು ಬೆಲ್ಲದಲ್ಲಿ ಕಬ್ಬಿಣ ಮತ್ತು ಫೋಲೇಟ್‌ನಲ್ಲಿ ಅಧಿಕವಾಗಿರುವುದರಿಂದ ಆರೋಗ್ಯಕರ ಹಿಮೋಗ್ಲೋಬಿನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ದೇಹದ ತಾಪಮಾನ ನಿಯಂತ್ರಣ:
ಬಹುತೇಕ ಜನರು ಬೆಲ್ಲವನ್ನು ಚಳಿಗಾಲದಲ್ಲಿ ಮಾತ್ರ ಸೇವಿಸುತ್ತಾರೆ. ಆದರೆ ಇದು ಬೇಸಿಗೆಯಲ್ಲೂ ಸಹಕಾರಿಯಾಗಿದೆ ಎಂದು ಹಲವರಿಗೆ ತಿಳಿದಿಲ್ಲ. ಬೆಲ್ಲವನ್ನು ನೀರಿನೊಂದಿಗೆ ಕುಡಿದರೆ ದೇಹವನ್ನು ತಂಪಾಗಿಡಬಹುದು. ಚಳಿಗಾಲದಲ್ಲಿ ಬೆಲ್ಲ ತಾಪಮಾನ ಬದಲಾಗದಂತೆ ಸಹಾಯ ಮಾಡುತ್ತದೆ.

ಬೆಲ್ಲವನ್ನು ದೈನಂದಿನ ಆಹಾರದಲ್ಲಿ ಸೇರಿಸುವ ಸರಳ ಮಾರ್ಗಗಳು ಇಲ್ಲಿವೆ: ಚಹಾ ಅಥವಾ ಕಾಫಿಯಲ್ಲಿ ಸಕ್ಕರೆಯ ಬದಲು ಒಂದು ತುಂಡು ಬೆಲ್ಲ ಸೇರಿಸಬಹುದು.
ಲಡ್ಡು, ಕೀರ್, ಚಿಕ್ಕಿ ಮುಂತಾದ ತಿನಿಸುಗಳನ್ನು ತಯಾರಿಸುವಾಗ ಬೆಲ್ಲ ಬಳಸಬಹುದು.

ಬಿಸಿ ನೀರಿಗೆ ಬೆಲ್ಲ ಮತ್ತು ನಿಂಬೆ ಸೇರಿಸಿ ದೇಹಕ್ಕೆ ಶಕ್ತಿ ಹೆಚ್ಚಿಸುವ ನೈಸರ್ಗಿಕ ಡಿಟಾಕ್ಸ್ ಪಾನೀಯವಾಗಿ ಕುಡಿಯಬಹುದು.
ಬೆಲ್ಲ ಕೇವಲ ಸಿಹಿಪದರವಷ್ಟೇ ಅಲ್ಲ, ಇದು ಆರೋಗ್ಯಕ್ಕೆ ಪೂರಕವಾದ ಪೋಷಕಾಂಶಗಳ ಆಗರ. ಆದ್ದರಿಂದ, ಮುಂದಿನ ಸಲ ಸಿಹಿ ತಿನ್ನಬೇಕೆಂದರೆ ಸಕ್ಕರೆಯ ಬದಲು ಬೆಲ್ಲವನ್ನು ಆಹಾರಗಳಲ್ಲಿ ಬಳಸಿ ಆರೋಗ್ಯ ಕಾಪಾಡಿಕೊಳ್ಳಿ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳ ಮಾಹಿತಿಯನ್ನು ಆಧರಿಸಿದೆ. ಡೈಲಿ ವಾರ್ತೆ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.