


ಡೈಲಿ ವಾರ್ತೆ: 30/ಮಾರ್ಚ್ /2025


ಕುಂದಾಪುರ ಉಪವಿಭಾಗಾಧಿಕಾರಿ ಮಹೇಶ್ ಚಂದ್ರ ಸಸ್ಪೆಂಡ್

ಕುಂದಾಪುರ : ಕುಂದಾಪುರದ ಉಪವಿಭಾಗಾಧಿಕಾರಿ ಕೆ ಎ ಎಸ್ ಶ್ರೇಣಿಯ ಮಹೇಶ್ ಚಂದ್ರ ಅವರನ್ನು ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಉಪವಿಭಾಗಾಧಿಕಾರಿಯವರ ಕರ್ತವ್ಯ ಲೋಪದ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು ಉಡುಪಿ ಜಿಲ್ಲೆ ಇವರು ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಿದ್ದು , ಡಿಸಿಯವರ ವರದಿ ಆಧಾರದ ಮೇಲೆ ಸರ್ಕಾರದ ಅಧೀನ ಕಾರ್ಯದರ್ಶಿ ಈ ಆದೇಶ ಹೊರಡಿಸಿದ್ದಾರೆ.
ಅಲ್ಲದೆ ಮುಂದಿನ ಆದೇಶದವರೆಗೆ ಕುಂದಾಪುರ ಉಪವಿಭಾಗ ಹುದ್ದೆಯ ಪ್ರಭಾರವನ್ನು ಬ್ರಹ್ಮಾವರ ತಹಶೀಲ್ದಾರ್ ಶ್ರೀ ಶ್ರೀಕಾಂತ್ ಹೆಗ್ಡೆ ಅವರಿಗೆ ನಿರ್ವಹಿಸುವಂತೆ ಆದೇಶಿಸಲಾಗಿದೆ.
ಮಾಜಿ ಶಾಸಕರೋರ್ವರ ಸಂಪೂರ್ಣ ಕ್ರಪೆಯಿಂದ ಸಾಕಷ್ಟು ಕಪ್ಪವನ್ನು ಸಲ್ಲಿಸಿಯೇ ಕುಂದಾಪುರ ಏ ಸಿ ಹುದ್ದೆಯನ್ನು ಏರಿದ ಇವರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನವು ಹೊಗೆಯಾಡಿತ್ತು.
ಆದಾಗ ಕುಂದಾಪುರ ಉಪವಿಭಾಗಾಧಿಕಾರಿಯಾಗಿ ಸಾರ್ವಜನಿಕರ ಮೆಚ್ಚುಗೆ ಗಳಿಸಿದ ರಶ್ಮಿ ಅವರ ದಿಡೀರ್ ವರ್ಗಾವಣೆಯು ಕೂಡಾ ಕಾರಣವಾಗಿತ್ತು.
ಇಲ್ಲಿ ಉಪವಿಭಾಗಾಧಿಕಾರಿ ಅಧಿಕಾರ ವಹಿಸಿಕೊಂಡ ಕೂಡಲೇ ಪಟ್ಟಾಗಿ ಭೋಜನಕ್ಕೆ ಕುಂತ ಏ ಸಿ ಮಹೇಶ್ ಚಂದ್ರ ಅವರ ಮೇಲೆ ಸಾಕಷ್ಟು ಭ್ರಷ್ಟಾಚಾರದ ಆರೋಪಗಳು ಸದ್ದು ಮಾಡಿದ್ದವು. ಇನ್ನೇನು ನಿವೃತ್ತಿ ಹೊಂದಲು ಬೆರಳೆಣಿಕೆಯಷ್ಟು ತಿಂಗಳುಗಳ ಕಾಲ ಬಾಕಿ ಇರುವಾಗಲೇ ಮಹೇಶ್ ಚಂದ್ರ ಸಸ್ಪೆಂಡ್ ಆಗಿದ್ದಾರೆ. ಇದರ ಹಿಂದೆ ಕಾಂಗ್ರೆಸ್ ಪಕ್ಷದ ಕೆಲವು ಮಾಜಿಗಳ ರಾಜಕೀಯ ತಿಕ್ಕಾಟವೂ ಕಾರಣವೆನ್ನಲಾಗುತ್ತಿದೆ.