ಡೈಲಿ ವಾರ್ತೆ: 01/ಏಪ್ರಿಲ್ /2025

ರಂಜಾನ್ ಆಚರಣೆ ವೇಳೆ ವಿವಾದಿತ ಪೋಸ್ಟರ್ ಪ್ರದರ್ಶನ – ಎಸ್‌ಡಿಪಿಐ ಮುಖಂಡನ ಬಂಧನ

ಹುಬ್ಬಳ್ಳಿ: ರಂಜಾನ್ ಹಬ್ಬದ ಪ್ರಾರ್ಥನೆ ವೇಳೆ ಅವಹೇಳನಕಾರಿ ಪ್ಲೇ ಕಾರ್ಡ್ ಪ್ರದರ್ಶಿಸಿದ್ದ ಪ್ರಕರಣದಲ್ಲಿ ಎಸ್‌ಡಿಪಿಐ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.

ಎಸ್‌ಡಿಪಿಐ ಮುಖಂಡ ಅಬ್ದುಲ್ ಗಪ್ಪುರ್ ಕುರಹಟ್ಟಿ ಬಂಧಿತ ಆರೋಪಿ. ರಂಜಾನ್ ಹಬ್ಬ ಆಚರಣೆ ಸಮಯದಲ್ಲಿ ಒಂದು ಕಡೆ ಶಾಂತಿಯುತ ರಂಜಾನ್ ಪ್ರಾರ್ಥನೆ ನಡೆಯುತ್ತಿದ್ದರೆ, ಮತ್ತೊಂದೆಡೆ ವಿವಿಧ ವಿಷಯಗಳ ಪ್ಲೇ ಕಾರ್ಡ್ ಹಿಡಿದು, ಕೈಗೆ ಕಪ್ಪು ಪಟ್ಟಿ ಧರಿಸಿ ಎಸ್‌ಡಿಪಿಐ (SDPI) ಕಾರ್ಯಕರ್ತರು ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಬಳಿ ಪ್ಯಾಲೆಸ್ಟಿನ್‌ನಲ್ಲಿ ಯುದ್ಧ ನಿಲ್ಲಬೇಕು, ಎಸ್‌ಡಿಪಿಐ ಅಧ್ಯಕ್ಷ ಎಂಕೆ ಫೈಜಿ ಬಿಡುಗಡೆಯಾಗಬೇಕು, ವಕ್ಫ್ ಆಸ್ತಿ ಎಂದಿಗೂ ಮುಸ್ಲಿಮರದ್ದೇ, ದೇಶ, ಮನಸ್ಸು ಒಡೆದವರು ಮುಸ್ಲಿಂ ಆಸ್ತಿ ಮೇಲೆ ಕಣ್ಣು ಹಾಕಿದ್ದಾರೆ ಎಂದು ಕೇಂದ್ರ ಸರ್ಕಾರ, ಸಂಘಪರಿವಾರ ಗುರಿಯಾಗಿಟ್ಟುಕೊಂಡು ವಿವಿಧ ಪೋಸ್ಟರ್‌ಗಳ ಪ್ರದರ್ಶನ ಮಾಡಿದರು. ಇದರಿಂದ ಆಕ್ರೋಶಗೊಂಡು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಉಪನಗರ ಪೊಲೀಸ್ ಠಾಣೆಯಲ್ಲಿ ಎಸ್‌ಡಿಪಿಐ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿದ್ದರು.

ದೂರಿನ ಅನ್ವಯ ಅಬ್ದುಲ್ ಗಪ್ಪುರ್ ಕುರಹಟ್ಟಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಎಫ್‌ಐಆರ್ ದಾಖಲಾಗುತ್ತಿದ್ದಂತೆ ಅಬ್ದುಲ್ ಗಪ್ಪುರ್‌ನನ್ನು ಬಂಧಿಸಿದ ಪೊಲೀಸರು ತನಿಖೆ ನಡೆಸಿದ್ದಾರೆ.

ಪೊಲೀಸರು ಅಬ್ದುಲ್ ಗಪ್ಪುರ್ ಮೊಬೈಲ್ ಫೋನ್ ಸಹ ವಶಕ್ಕೆ ಪಡೆದಿದ್ದಾರೆ. ಆರೋಪಿಗೆ ಕೋರ್ಟ್ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.