

ಡೈಲಿ ವಾರ್ತೆ: 04/ಏಪ್ರಿಲ್ /2025


ಬ್ರಹ್ಮಾವರ| ಟಿಪ್ಪರ್ ಹಾಗೂ ಸ್ಕೂಟರ್ ನಡುವೆ ಭೀಕರ ರಸ್ತೆ ಅಪಘಾತ – ಸವಾರ ಮೃತ್ಯು, ಸಹಸವಾರ ಗಂಭೀರ

ಬ್ರಹ್ಮಾವರ: ಟಿಪ್ಪರ್ ಹಾಗೂ ಸ್ಕೂಟರ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿ ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಏ. 4 ರಂದು ಶುಕ್ರವಾರ ಸಂಜೆ ಬ್ರಹ್ಮಾವರ ತಾಲೂಕಿನ ಪೇತ್ರಿ ಜಂಕ್ಷನ್ ಬಳಿ ಸಂಭವಿಸಿದೆ.

ಮೃತ ಯುವಕನನ್ನು ಸಾಸ್ತಾನ, ಐರೋಡಿ ಗೋಳಿಬೆಟ್ಟು ನಿವಾಸಿ ದೀಕ್ಷಿತ್ (24) ಎಂದು ಗುರುತಿಸಲಾಗಿದೆ. ಸಹ ಸವಾರ ಅಭಿಷೇಕ್ ಗಂಭೀರ ಗಾಯಗೊಂಡಿದ್ದು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಮೇಶ್ವರ ಸಮೀಪದ ಕೂಡ್ಲು ಫಾಲ್ಸ್ ಗೆ ಪ್ರವಾಸಕ್ಕೆ ಹೋಗಿದ್ದ ಯುವಕರು ಹಿಂದಿರುಗಿ ಬರುವಾಗ
ಟಿಪ್ಪರ್ ಚಾಲಕ ಅತೀವೇಗ ಹಾಗೂ ಅಜಾಗರೂಕತೆ ಚಲಾಯಿಸಿಕೊಂಡು ಬ್ರಹ್ಮಾವರದಿಂದ ಕುಕ್ಕೆಹಳ್ಳಿ ಕಡೆಗೆ ಹೋಗುವ ಸಲುವಾಗಿ ಪೇತ್ರಿ ಜಂಕ್ಷನ್ ನಲ್ಲಿ ಬಲಕ್ಕೆ ತಿರುಗುವ ವೇಳೆ ಹೆಬ್ರಿ ಕಡೆಯಿಂದ ಬ್ರಹ್ಮಾವರಕ್ಕೆ ಹೋಗುತ್ತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆದಿದ್ದು ಇಬ್ಬರೂ ಕೂಡ ರಸ್ತೆಗೆ ಅಪ್ಪಳಿಸಿ ತಲೆಗೆ ಗಂಭೀರ ಗಾಯಗಳಾಗಿದ್ದು ದೀಕ್ಷೀತ್ ಸ್ಥಳದಲ್ಲಿಯೇ ಮೃತಪಟ್ಟಿದ್ದು ಅಭಿಷೇಕ್ ಗಂಭೀರ ಗಾಯಗೊಂಡಿದ್ದಾರೆ. .
ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.