

ಡೈಲಿ ವಾರ್ತೆ: 07/ಏಪ್ರಿಲ್/2025


ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ಸಂತ್ರಸ್ತರ ಸಭೆ: ಸರಕಾರದ ಆದೇಶವನ್ನು ಉಲ್ಲಂಘಿಸಿ ಸಂತ್ರಸ್ತರ ವಿಚಾರಣೆ – ಕೋಟ ನಾಗೇಂದ್ರ ಪುತ್ರನ್

ಉಡುಪಿ: ಮಲ್ಪೆ ಮಹಾಲಕ್ಷ್ಮಿಕೋ ಆಪರೇಟಿವ್ ಬ್ಯಾಂಕ್ ಸಂತ್ರಸ್ತರ ಹೋರಾಟ ಸಮಿತಿಯ ಸಭೆಯು ಇಂದು ಉಡುಪಿಯ ನಾರಾಯಣ ಗುರು ಸಭಾಭವನದಲ್ಲಿ ನಡೆಯಿತು. ಈಗಾಗಲೇ ಕಾನೂನಿನಡಿಯಲ್ಲಿ ಎಲ್ಲಾ ರೀತಿಯ ಹೋರಾಟಗಳು ನಡೆಯುತ್ತಿದ್ದು ಸಂತ್ರಸ್ತರಿಗೆ ಮಾತ್ರ ಯಾವುದೇ ಸೂಕ್ತ ರೀತಿಯ ಪರಿಹಾರ ಸಿಗಲಿಲ್ಲ.
ಸಂತ್ರಸ್ತರ ಪರ ಹೋರಾಟ ಮಾಡುತ್ತಿರುವ ಸಾಮಾಜಿಕ ಹೋರಾಟಗಾರ ಕೋಟ ನಾಗೇಂದ್ರ ಪುತ್ರನ್ ಮಾತನಾಡಿ, ನಾವು ಸುಮಾರು 8 ತಿಂಗಳಿಂದ ಕೋ. ಆಪರೇಟಿವ್ ಬ್ಯಾಂಕ್ ನಿಂದ ಆಗಿರುವ ಅನ್ಯಾಯದ ಬಗ್ಗೆ ನಿರಂತರ ಹೋರಾಟ ಮಾಡಿ, ಸಂಬಂಧಪಟ್ಟ ಎಲ್ಲ ಅಧಿಕಾರಿ ಅವರಿಗೂ ದೂರು ನೀಡಿದ್ದೇವೆ. ಆ ಪ್ರಕಾರವಾಗಿ ಸರಕಾರ ಇದೊಂದು ಗಂಭೀರ ಪ್ರಕರಣ ಎಂದು ಪರಿಗಣಿಸಿ ಸರಕಾರದ ಅಧಿನಿಯಮ 64 ರಡಿ ಅಲ್ಲಿ ತನಿಖೆ ನಡೆಸಲು ಉಡುಪಿ ಜಿಲ್ಲಾ ಉಪ ನಿಬಂಧಕರು ಲಾವಣ್ಯ ಅವರನ್ನು ವಿಚಾರಣ ಅಧಿಕಾರಿಯಾಗಿ ಸರಕಾರ ನೇಮಿಸಿದೆ.
ಆದರೆ ಸರಕಾರದ ಅಧಿನಿಯಮವನ್ನ ಪಾಲಿಸದ ಸಂತ್ರಸ್ತರನ್ನು ಬಾಯಿಗೆ ಬಂದಂತೆ ಬೈದು, ಹೆದರಿಸಿ, ಸಂತ್ರಸ್ತರು ಕೊಟ್ಟ ಹೇಳಿಕೆಯನ್ನು ತಿರುಚಿ ಮೋಸ ಮಾಡುವ ಉದ್ದೇಶದಿಂದಲೇ ಸರಕಾರ ಇವರಿಗೆ ಕೊಟ್ಟ (ಸರಕಾರಿ ಸಂಘಗಳ ಉಪ ನಿಬಂಧಕರು ಉಡುಪಿ ಜಿಲ್ಲೆ) ಜವಾಬ್ದಾರಿಯನ್ನು ಶಿರಸಿಯ ಒಂದು ಬ್ಯಾಂಕ್ ನಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಅಮಾನತು ಆಗಿರುವ ಮಂಜುನಾಥ ಸಿಂಗ್ ಎಂಬ ವ್ಯಕ್ತಿಯಿಂದ ನಮ್ಮ ಸಂತ್ರಸ್ತರ ವಿಚಾರಣೆ ಮಾಡಿ, ಸರಕಾರದ ಆದೇಶವನ್ನು ಉಲ್ಲಂಘಿಸಿ ವಿಚಾರಣೆ ಮಾಡಿದ್ದಾರೆ ಎಂದು ಆರೋಪಿಸಿದರು.
ಸಹಕಾರಿ ಸಂಘದ ಉಡುಪಿ ಉಪ ನಿಬಂಧಕರ ಕಛೇರಿಯಲ್ಲಿ ಬೇಕಾದಷ್ಟು ಜಾಗದ ವ್ಯವಸ್ಥೆಗಳು ಇದ್ದರು ಬಡಗುಬೆಟ್ಟಿನ ಜಗನ್ನಾಥ ಭವನದ ಕಟ್ಟಡದಲ್ಲಿ ಸಂತ್ರಸ್ತರಿಗೆ ಮೋಸ ಮಾಡುವ ಉದ್ದೇಶದಿಂದ ಅಮಾನತ್ತಿನಲ್ಲಿದ್ದ ಅಧಿಕಾರಿಯ ಮೂಲಕ ಸಂತ್ರಸ್ತರ ವಿಚಾರಣೆ ಮಾಡಿದ್ದಾರೆ. ಈ ವಿಚಾರಣೆಯನ್ನು ಮರುತನಿಕೆ ಮಾಡುವಂತೆ ನಾವು ಉನ್ನತ ಮಟ್ಟದ ಅಧಿಕಾರಿಯವರನ್ನು ಭೇಟಿ ಮಾಡಿ ಕೇಳಿಕೊಂಡಿದ್ದೇವೆ. ಆ ಪ್ರಕಾರ ಅವರು ಮರು ತನಿಖೆಗೆ ಸೂಚನೆ ನೀಡುವುದಾಗಿ ಹೇಳಿದ್ದಾರೆ ಎಂದು ಹೇಳಿದರು.
ಈ ಸಭೆಯ ಮೂಲಕ ಸಂತ್ರಸ್ತರಿಗೆ ಹೇಳುವುದು ಏನೆಂದರೆ ತಮಗೆ ಆಗಿರುವ ಅನ್ಯಾಯವನ್ನು ಮುಂದೆ ಬರುವ ವಿಚಾರಣ ಅಧಿಕಾರಿಯವರಲ್ಲಿ ವಿವರವಾಗಿ ತಿಳಿಸಿ ಮರು ತನಿಖೆಯಲ್ಲಿ ಭಾಗವಹಿಸಬೇಕು ಎಂದು ಕೇಳುತ್ತೇವೆ.

ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿ, ಕೋ ಆಪರೇಟಿವ್ ವ್ಯವಸ್ಥೆ ಎಷ್ಟು ಭ್ರಷ್ಟ ಆಗಿದೆ ಎಂದರೆ ಇದರಿಂದ ಪಿ ಎಚ್ ಡಿ ಮಾಡಬಹುದು. ಕೆಲವೊಂದು ಕೋ ಆಪರೇಟಿವ್ ಬ್ಯಾಂಕ್ ಗಳಲ್ಲಿ ನೇಮಕಾತಿಗೆ 25 ಲಕ್ಷ ರೇಟ್ ಪಿಕ್ಸ್ ಮಾಡಿದ್ದಾರೆ ಕೋ ಆಪರೇಟಿವ್ ಎನ್ನುವುದು ಭ್ರಷ್ಟ ಆಗಿಹೋಗಿದೆ ಎಂದು ಹೇಳಿದರು.

ಮಲ್ಪೆಯ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ಅನ್ನು ಹಿರಿಯರು ಕಷ್ಟ ಪಟ್ಟು ಕಟ್ಟಿದ್ದಾರೆ ಅಂತಹ ಬ್ಯಾಂಕಿಗೆ ಕಳಂಕ ತರಲು ಬಿಡಬಾರದು. ಪ್ರಸ್ತುತ ಉಡುಪಿಯ ಶಾಸಕರೇ ಬ್ಯಾಂಕಿನ ಅಧ್ಯಕ್ಷರು ಸಹ ಆಗಿದ್ದಾರೆ, ಶಾಸಕನಾಗಿದ್ದವರು ಅವರ ಮತದಾರರ ಸಮಸ್ಯೆಗಳನ್ನು ಆಲಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಆ ಹಿನ್ನಲೆಯಲ್ಲೆಯಾದರೂ ಸಂತ್ರಸ್ತರರನ್ನು ಕರೆಸಿ ಅವರಿಗೆ ನ್ಯಾಯವನ್ನು ಒದಗಿಸುವ ಕೆಲಸ ಶೀಘ್ರವಾಗಿ ಮಾಡಬೇಕು.
ಬ್ಯಾಂಕಿನ ಮ್ಯಾನೇಜರ್ ಸುಬ್ಬಣ್ಣ ಅಪರಾಧ ಮಾಡಿರಬಹುದು ಆದರೆ ಕೇವಲ ಬ್ಯಾಂಕ್ ಮ್ಯಾನೇಜರ್ ನಿಂದ ಇಷ್ಟೆಲ್ಲಾ ಮಾಡಲು ಸಾಧವಾ ? ಸಂತ್ರಸ್ತರ ಸಹಿಯನ್ನು ಫಾರೆನ್ಸಿಕ್ ಗೆ ಕಳುಹಿಸಿ ಸರಿಯಾದ ತನಿಖೆ ಆಗಬೇಕು ಎಂದು ಹೇಳಿದರು.
ಸಂತ್ರಸ್ತರ ಪರ ನಿಂತದಕ್ಕೆ ಬ್ಯಾಂಕಿನಿಂದ ನನಗೆ ನೋಟೀಸು ಕಳುಹಿಸಿದರು ಅದಕ್ಕೆಲ್ಲ ಹೆದರದೆ ಸರಿಯಾದ ಉತ್ತರವನ್ನು ಸಹ ನಾನು ಬ್ಯಾಂಕಿಗೆ ಕಳುಹಿಸಿದೆ. ಅನ್ಯಾಯವಾಗಿದೆ ಎಂದು ಯಾರೂ ಬಂದರೂ, ಅವರಿಗೆ ನ್ಯಾಯವನ್ನು ಕೊಡಿಸಲು ಅವರ ಪರವಾಗಿ ನಿಲ್ಲುವವನು ನಾನು. ಬೆದರಿಕೆಗೆ ಹೆದರುವವನಲ್ಲ, ಹೆದರಿಕೆ ಇದ್ದಿದ್ದರೆ ರಾಜಕೀಯಕ್ಕೆ ಬರುತ್ತಿರಲಿಲ್ಲ ಎಂದು ಹೇಳಿದರು.
ಬೀದಿರಂಪ ಆಗುವ ಮೊದಲು ಶಾಸಕರೇ ಪ್ರತಿಯೊಬ್ಬರ ಸಮಸ್ಯೆಗಳನ್ನು ಆಲಿಸಿ ಸಂತ್ರಸ್ತರಿಗೆ ನ್ಯಾಯವನ್ನು ಒದಗಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಉಡುಪಿ ನಗರ ಸಭೆ ಸದಸ್ಯ ರಮೇಶ್ ಕಾಂಚನ್ ಸಂತ್ರಸ್ತರಿಗೆ ನ್ಯಾಯ ಸಿಗವ ವರೆಗೂ ನಿಮ್ಮ ಜೊತೆ ನಾನಿದ್ದೇನೆ ಎಂದು ಬೆಂಬಲ ಸೂಚಿದರು. ಸಂತ್ರಸ್ತರಾದ ದೀಪಕ್ ಶೆಣೈ, ಆಫ್ರೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.