


ಡೈಲಿ ವಾರ್ತೆ: 12/ಏಪ್ರಿಲ್/2025


ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ : ಮಕ್ಕಳನ್ನು ರಕ್ಷಿಸಿ ಪಾರಾದ ತಾಯಿ (ವಿಡಿಯೋ ವೈರಲ್)

ಗುಜರಾತ್: ಬಹುಮಹಡಿ ಕಟ್ಟಡವೊಂದರಲ್ಲಿ ಅಗ್ನಿ
ಅವಘಡ ಸಂಭವಿಸಿದ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ಶುಕ್ರವಾರ ಸಂಜೆ ಸಂಭವಿಸಿದ್ದು ಕಟ್ಟಡದಲ್ಲಿರುವ ಜನ ಪಾರಾಗುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಈ ವೇಳೆ ಕಟ್ಟಡದಲ್ಲಿ ಹಲವು ಮಂದಿ ಸಿಲುಕಿಕೊಂಡಿದ್ದಾರೆ ಈ ನಡುವೆ ನಾಲ್ಕನೇ ಮಹಡಿಯಲ್ಲಿದ್ದ ಮಹಿಳೆಯೊಬ್ಬರು ಬಾಲ್ಕನಿ ಬಳಿ ನಿಂತು ತನ್ನ ಇಬ್ಬರು ಮಕ್ಕಳನ್ನು ರಕ್ಷಣೆ ಮಾಡುವಂತೆ ಕೇಳಿಕೊಂಡಿದ್ದಾರೆ ಇದನ್ನು ಗಮನಿಸಿದ ಕೆಳಗಿನ ಮಹಡಿಯಲ್ಲಿದ್ದ ವ್ಯಕ್ತಿಗಳು ಸಹಾಯಕ್ಕೆ ಮುಂದಾಗಿದ್ದಾರೆ, ಅದರಂತೆ ಮಹಿಳೆ ಮೊದಲು ಓರ್ವ ಮಗನನ್ನು ಕಿಟಕಿಯ ಮೂಲಕ ಕೆಳಗೆ ನೀಡಿದ್ದಾಳೆ ಕೆಳಗಿನ ಮಹಡಿಯಲ್ಲಿ ಇಬ್ಬರು ವ್ಯಕ್ತಿಗಳು ಕಿಟಕಿಯಲ್ಲಿ ನಿಂತು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ ಇಬ್ಬರು ಮಕ್ಕಳನ್ನು ರಕ್ಷಣೆ ಮಾಡಿದ ಬಳಿಕ ಮಹಿಳೆ ತಾನೂ ಕಿಟಕಿಯಿಂದ ನೇತಾಡಿ ಕೆಳಗಿದ್ದ ವ್ಯಕ್ತಿಗಳು ಆಕೆಯನ್ನು ಹಿಡಿದು ರಕ್ಷಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅಗ್ನಿಶಾಮಕ ಸಿಬ್ಬಂದಿಯಿಂದ ಹಲವರ ರಕ್ಷಣೆ:
ಇನ್ನು ಘಟನಾ ಸ್ಥಳಕ್ಕೆ ಸುಮಾರು ಹತ್ತಕ್ಕೂ ಅಧಿಕ ಅಗ್ನಿಶಾಮಕ ವಾಹನಗಳು ಧಾವಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಜೊತೆಗೆ ಕಟ್ಟಡದ ಒಳಗೆ ಸಿಲುಕಿದ್ದ ಸುಮಾರು ಹದಿನೆಂಟಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಿದ್ದಾರೆ. ಅಧಿಕಾರಿಗಳ ಮಾಹಿತಿ ಪ್ರಕಾರ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಿದ್ದಾರೆ.