


ಡೈಲಿ ವಾರ್ತೆ: 17/ಏಪ್ರಿಲ್/2025


1ನೇ ತರಗತಿ ಸೇರ್ಪಡೆಗೆ 5 ವರ್ಷ 5 ತಿಂಗಳು, ವಯೋಮಿತಿ ಸಡಿಲ: ಶಿಕ್ಷಣ ಸಚಿವ ಘೋಷಣೆ: ನಮ್ಮ ಮನವಿಗೆ ಸಂದ ಫಲಶೃತಿ: ನಾಗೇಂದ್ರ ಪುತ್ರನ್ ಕೋಟ

ಕರ್ನಾಟಕದಲ್ಲಿ 1ನೇ ತರಗತಿಗೆ ಮಕ್ಕಳ ಸೇರ್ಪಡೆಗೆ ಇರುವ ವಯೋಮಿತಿಯನ್ನು ರಾಜ್ಯ ಸರ್ಕಾರ ಸಡಿಲಗೊಳಿಸಿದೆ. ಮಕ್ಕಳಿಗೆ 5 ವರ್ಷ 5 ತಿಂಗಳು ಆಗಿದ್ದರೂ ಅವರು ಶಾಲೆಗೆ ದಾಖಲಾಗಲು ಅವಕಾಶ ನೀಡಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ.
ಈ ಹಿಂದೆ, ಮಕ್ಕಳು 1ನೇ ತರಗತಿಗೆ ದಾಖಲಾಗಲು ಕಡ್ಡಾಯವಾಗಿ 6 ವರ್ಷದ ವಯೋಮಿತಿಯನ್ನು ಪೂರೈಸಿರಬೇಕಿತ್ತು.
ಇದರಿಂದ ಅಂಗನವಾಡಿ, ಎಲ್ಕೆಜಿ, ಯುಕೆಜಿಗಳಲ್ಲಿ ಜೊತೆಗೆ ಇದ್ದು ತನ್ನ ಸಹಪಾಠಿ ಮಗು ಒಂದನೇ ತರಗತಿಗೆ ತೇರ್ಗಡೆ ಆಗುವಾಗ ಪ್ರಾಯದಲ್ಲಿ ಬರಿ 10, 20 ದಿನಗಳ ಅಂತರವಿರುವ ಮಗು ಮುಂದಿನ ಹಂತಕ್ಕೆ ತೇರ್ಗಡೆಯ ಅವಕಾಶ ಇಲ್ಲ ಅಂದಾಗ ಮಗುವಿನ ಮಾನಸಿಕ ಸ್ಥಿತಿ ಮತ್ತು ವಿದ್ಯಾಭ್ಯಾಸದಲ್ಲಿ ವ್ಯತ್ಯಾಸ ಆಗಬಹುದು. ಆದ್ದರಿಂದ 2025 ನೇ ಸಾಲಿನಲ್ಲಿ ಶಾಲೆಗಳು ಶೀಘ್ರದಲ್ಲಿ ಪುನಃ ಆರಂಭವಾಗಲಿದ್ದು ಸರ್ಕಾರ ಕೂಡಲೇ ಜೂನ್ ತಿಂಗಳಲ್ಲಿ ಹುಟ್ಟಿದ ಮಗುವಿಗೆ ಯುಕೆಜಿ ಯಿಂದ 1ನೇ ತರಗತಿಗೆ ಮುನ್ನಡೆಯಲು ಸರಕಾರ ರಿಯಾಯಿತಿ ಕೊಡಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಕೋಟ ಇವರು ಇಲಾಖಾ ಸಂಬಂಧಿತರಿಗೆ ಸಾಕಷ್ಟು ಮನವಿ ಮಾಡಿದ್ದರು.
ಇಂದು ಆ ಮನವಿಗೆ ಫಲಶೃತಿಯಾಗಿ ಶಿಕ್ಷಣ ಸಚಿವರು
ಇದೀಗ ವಯೋಮಿತಿಯ ಮಾನದಂಡವನ್ನು ಸಡಿಲಿಸಿದ್ದಾರೆ.
5 ವರ್ಷ 5 ತಿಂಗಳು ವಯೋಮಾನವನ್ನು ಪೂರೈಸಿದ್ದ ಮಕ್ಕಳು 1ನೇ ತರಗತಿಗೆ ದಾಖಲಾಗಬಹುದಾಗಿದೆ. ಆದಾಗ್ಯೂ ಸಂಪೂರ್ಣ ಆರು ವರ್ಷ ಪೂರೈಸಿರದ ಮಕ್ಕಳು 1ನೇ ತರಗತಿಗೆ ದಾಖಲಾಗಲು ಅವರು ಯುಕೆಜಿ ಕಲಿತಿರಬೇಕು ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
“ಎಲ್‌ಕೆಜಿ, ಯುಕೆಜಿಯಲ್ಲಿ ಕಲಿತಿದ್ದರೆ ಮಾತ್ರವೇ 5 ವರ್ಷ 5 ತಿಂಗಳು ಆಸುಪಾಸಿನ ಮಕ್ಕಳಿಗೆ 1ನೇ ತರಗತಿಗೆ ಪ್ರವೇಶ ನೀಡಲಾಗುತ್ತದೆ. ಈ ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ. ವಯೋಮಿತಿ ಸಡಿಲಿಕೆಯು ಈ ವರ್ಷಕ್ಕೆ ಮಾತ್ರವೇ ಅನ್ವಯವಾಗುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ.