ಡೈಲಿ ವಾರ್ತೆ: 17/ಏಪ್ರಿಲ್/2025

ಮಂಗಳೂರು| ಹೊರ ರಾಜ್ಯದ ಯುವತಿ ಮೇಲೆ ಮೂವರಿಂದ ಗ್ಯಾಂಗ್ ರೇಪ್: ರಿಕ್ಷಾ ಚಾಲಕನ ಬಂಧನ

ಉಳ್ಳಾಲ: ನಗರದ ಹೊರವಲಯದಲ್ಲಿರುವ ನೇತ್ರಾವತಿ ನದಿ ಕಿನಾರೆ ಗ್ರಾಮವೊಂದರಲ್ಲಿ ರಿಕ್ಷಾ ಚಾಲಕ ಸೇರಿ ಮೂವರು ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಏ. 16 ರಂದು ಬುಧವಾರ ತಡರಾತ್ರಿ ನಡೆದಿದೆ.

ಮುನ್ನೂರು ಗ್ರಾಮ ಮತ್ತು ಉಳ್ಳಾಲ ನಗರಸಭೆ ಗಡಿಯಲ್ಲಿರುವ ನೇತ್ರಾವತಿ ನದಿ ಸಮೀಪದ ಬೊಳ್ಳ ಹೌಸ್ ಬಳಿ ಘಟನೆ ನಡೆದಿದೆ.

ಕುಂಪಲ ಬಗಂಬಿಲ ಮೂಲದ ರಿಕ್ಷಾ ಚಾಲಕ ಸೇರಿ ಮೂವರು ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದ್ದು, ರಿಕ್ಷಾ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ.ಬಂಗಾಳ ಮೂಲದ ಯುವತಿ ಉದ್ಯೋಗ ಅರಸಿ ಬಂದಿದ್ದಳು. ಕೇರಳದ ಉಪ್ಪಳ ಎಂಬಲ್ಲಿ ವಾಸವಾಗಿದ್ದಳು. ಸ್ನೇಹಿತನ ಜೊತೆಗೆ ಮಂಗಳೂರಿಗೆ ಬಂದಿದ್ದ ವೇಳೆ ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ಆಕೆ ಒಬ್ಬಳೇ ಮಧ್ಯರಾತ್ರಿ ಹೊರಗೆ ಬಂದಿದ್ದಾಳೆ. ಈ ವೇಳೆ ಸಿಕ್ಕ ರಿಕ್ಷಾ ಚಾಲಕನ ಬಳಿ ಸಹಾಯ ಕೇಳಿದ್ದಾಳೆ. ಸಹಾಯ ಮಾಡುವ ನೆಪದಲ್ಲಿ ತನ್ನ ವಾಹನದಲ್ಲಿ ಕುಳ್ಳಿರಿಸಿದ ಚಾಲಕ ಆಕೆಗೆ ಅಮಲು ಪದಾರ್ಥ ನೀಡಿ ಸ್ನೇಹಿತರ ಜೊತೆಗೆ ಸೇರಿ ಕೃತ್ಯವೆಸಗಿದ್ದಾನೆ.

ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಯುವತಿ ಪತ್ತೆ
ಮೈಪೂರ್ತಿ ಗಾಯವಾಗಿದ್ದ ಯುವತಿ ತಡರಾತ್ರಿ ವೇಳೆ ಸ್ಥಳೀಯರೊಬ್ಬರ ಮನೆ ಬಾಗಿಲು ಬಡಿದಿದ್ದಾಳೆ. ನೀರು ಕೇಳುತ್ತಿದ್ದಂತೆ ಅಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಮನೆಮಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಯುವತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ ವೇಳೆ ಯುವತಿ ನಶೆಯಲ್ಲಿ ಮಾತನಾಡದ ಸ್ಥಿತಿಯಲ್ಲಿದ್ದು, ಮೈಯಿಡೀ ಗಾಯದ ಗುರುತುಗಳಾಗಿತ್ತು.

ಸ್ಥಳಕ್ಕೆ ಪೊಲೀಸ್‌ ಕಮೀಷನ‌ರ್ ಅನುಪಮ್ ಅಗರವಾಲ್ ಭೇಟಿ ನೀಡಿದ್ದಾರೆ.