


ಡೈಲಿ ವಾರ್ತೆ: 17/ಏಪ್ರಿಲ್/2025


ಎಕ್ಸಲೆಂಟ್ ಕುಂದಾಪುರ : ‘ಬೆಸುಗೆ’ ಚಿಣ್ಣರ ಅಂಗಳದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ

ಕುಂದಾಪುರ: ಎಕ್ಸಲೆಂಟ್ ಹೈಸ್ಕೂಲು ಸುಣ್ಣಾರಿ, ಕುಂದಾಪುರ ಇದರ ಆಶ್ರಯದಲ್ಲಿ ದಿನಾಂಕ: 09/04/2025 ರಂದು ಉದ್ಘಾಟನೆಗೊಂಡಂತಹ ಚಿಣ್ಣರ ಅಂಗಳದ ಬೇಸಿಗೆ ಶಿಬಿರವಾದ ‘ ಬೆಸುಗೆ’ ಕಾರ್ಯಕ್ರಮವು ಸತತ ಎಂಟು ದಿನಗಳ ಕಾಲ ಬಹಳ ಸಾಂಸ್ಕೃತಿಕ ವೈಭವಗಳೊಂದಿಗೆ ಅದ್ಧೂರಿ ಕಾರ್ಯಕ್ರಮವಾಗಿ 13/04/2025 ರಂದು ಸಮಾರೋಪಗೊಂಡಿತು.
ಈ ಶಿಬಿರವು 200 ವಿದ್ಯಾರ್ಥಿಗಳ ಸೇರ್ಪಡೆಯ ನಿರೀಕ್ಷೆಯನ್ನು ಇಟ್ಟುಕೊಂಡು ಪ್ರಾರಂಭಿಸಲು ಯೋಜನೆ ಹಾಕಿಕೊಂಡರೂ, ನಿರೀಕ್ಷೆಗೂ ಮೀರಿ 250ಕ್ಕಿಂತಲೂ ಅಧಿಕ ಚಿಣ್ಣರೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿಬಂದಿತು.
ಚಿಣ್ಣರ ಉತ್ಸಾಹವನ್ನು ಇಮ್ಮಡಿಗೊಳಿಸುತ್ತಾ ಪ್ರತಿದಿನವು ಹೊಸ ಹೊಸ ಯೋಜನೆಗಳ ಬಣ್ಣ ಬಣ್ಣದ ಚಿತ್ತಾರಗಳೊಂದಿಗೆ ಮೂಡಿಬಂದ ಈ ಚಿಣ್ಣರ ಕಾರ್ಯಕ್ರಮವು 13/04/2025ರ ಸುಂದರ ಸಂಜೆಯಲ್ಲಿ ಸಮಾರೋಪಗೊಂಡಿರುತ್ತದೆ. ಈ ಸಮಾರೋಪ ಕಾರ್ಯಕ್ರಮಕ್ಕೆ ಹೊಸ ಮೆರುಗನ್ನು ನೀಡಲು ಹಾಗೂ ಚಿಣ್ಣರ ಜೊತೆ ಹಾಸ್ಯದ ಹೊನಲನ್ನು ಹರಿಸಲು ಅತಿಥಿ ಅಭ್ಯಾಗತರಾಗಿ ಆಗಮಿಸಿದ ಕರಾವಳಿ ಕುಂದಾಪುರದ ಕುಂದಗನ್ನಡದ ಹರಿಕಾರ ಹಾಗೂ ರಾಯಭಾರಿಯೆಂದು ಜನಮನದಲ್ಲಿ ಖ್ಯಾತರಾಗಿರುವ ಮನು ಹಂದಾಡಿಯವರು ಆಗಮಿಸಿ ಈ ಸಮಾರೋಪ ಕಾರ್ಯಕ್ರಮದಲ್ಲಿ ಚಿಣ್ಣರ ಬಳಗದೊಂದಿಗೆ ರಸವತ್ತಾದ ಕುಂದಗನ್ನಡದಲ್ಲಿ ಹಾಸ್ಯ ಚಟಾಕಿಯ ಮೂಲಕ ನಗುವಿನ ಅಲೆಯನ್ನು ಎಬ್ಬಿಸಿ, ಚಿಣ್ಣರ ಮನದಂಗಳದಲ್ಲಿ ಶಾಶ್ವತವಾಗಿ ಈ ಕಾರ್ಯಕ್ರಮ ನೆಲೆಗೊಳ್ಳುವಂತೆ ನಡೆದಿರುವುದು ಎಕ್ಸಲೆಂಟ್ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಹಾಸುಹೊಕ್ಕ ಒಂದು ಅದ್ಭುತ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆ ಯವರು ಮಾತನಾಡಿ, ಎಕ್ಸಲೆಂಟ್ ಸಂಸ್ಥೆಯ ಹಲವಾರು ಕಾರ್ಯಕ್ರಮಗಳು ಹಾಗೂ ಮುಂದಿನ ವರ್ಷದಲ್ಲಿ ಕ್ರೀಡೆ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಯೋಜನೆಗಳ ಕುರಿತು ಚಿಣ್ಣರಿಗೆ ಮನತಟ್ಟುವಂತೆ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
ಎಕ್ಸಲೆಂಟ್ ಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ ಶೆಟ್ಟಿಯವರು ಮಾತನಾಡಿ, ಚಿಣ್ಣರ ಲವಲವಿಕೆಯ ಅತ್ಯುತ್ತಮ ಹವ್ಯಾಸಗಳ ಕುರಿತು ಮನತುಂಬಿ ಪ್ರಶಂಸಿಸಿದರು.
ಈ ಸಂಧರ್ಭದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥೆಯಾಗಿರುವ ದಿವ್ಯಾ ಶೆಟ್ಟಿಯವರು ಮಾತನಾಡಿ, ಚಿಣ್ಣರಿಗೆ ಬದುಕಿನ ಸುಂದರ ಕಥೆಗಳ ಮೂಲಕ ಹೊಸ ಪರಿಸರಕ್ಕೆ ಹೇಗೆ ಹೊಂದಿಕೊಳ್ಳಬೇಕೆನ್ನುವ ಕುರಿತು ಸರಳವಾಗಿ ಮನಮುಟ್ಟುವಂತೆ ತಿಳಿಸಿದರು.
ಈ ಕಾರ್ಯಕ್ರಮದ ಯಶಸ್ವಿಯ ರೂವಾರಿಯಾದ ಎಕ್ಸಲೆಂಟ್ ಹೈಸ್ಕೂಲ್‌ನ ಮುಖ್ಯೋಪಾಧ್ಯಾಯಿನಿಯಾದ ಸರೋಜಿನಿ. ಪಿ. ಆಚಾರ್ಯರವರು ‘ಬೆಸುಗೆ’ ಕಾರ್ಯಕ್ರಮಕ್ಕೆ ಬಂದ ಚಿಣ್ಣರು ಹಾಗೂ ಚಿಣ್ಣರ ಪೋಷಕ ವರ್ಗದವರಿಗೂ, ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಸರ್ವರಿಗೂ ಧನ್ಯವಾದಗಳನ್ನು ಸಮರ್ಪಿಸಿದರು.
ಈ ಕಾರ್ಯಕ್ರಮದ ಪ್ರಾರಂಭದಲ್ಲಿ ಹಿಂದಿ ಶಿಕ್ಷಕಿ ಉಷಾಲತಾರವರು ಸರ್ವರನ್ನು ಸ್ವಾಗತಿಸಿದರು. ಕನ್ನಡ ಶಿಕ್ಷಕರಾದ ಸಂದೀಪ್ ರವರು ಸಮಾರೋಪ ಕಾರ್ಯಕ್ರಮವನ್ನು ನಿರೂಪಿಸಿದರು.