ಡೈಲಿ ವಾರ್ತೆ: 20/ಏಪ್ರಿಲ್/2025

ಕುಂದಾಪುರ: ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಬೇಸಿಗೆ ಶಿಬಿರ ದಾಖಲೆಯ 1064 ವಿದ್ಯಾರ್ಥಿಗಳು ಬಾಗಿ: “ಮಕ್ಕಳ ಪ್ರತಿಭೆಗಳ ಅನಾವರಣಕ್ಕೆ ಬೇಸಿಗೆ ಶಿಬಿರ ಸಹಕಾರಿ”- ಕೆ. ಜಯಪ್ರಕಾಶ್ ಹೆಗ್ಡೆ

” ಶಿಕ್ಷಣ ಎಂದರೆ ಕೇವಲ ಅಕ್ಷರ ಅಭ್ಯಾಸ ಅಲ್ಲ ಕ್ರೀಡೆ, ಕಲೆ ಮುಂತಾದ ಚಟುವಟಿಕೆಗಳು ಅದರ ಭಾಗವಾದರೆ ಮಾತ್ರ ಅವರೊಳಗಿನ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯವಾಗುತ್ತದೆ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಇಂತಹ ಬೇಸಿಗೆ ಶಿಬಿರಗಳು ಹೆಚ್ಚು ಸಹಕಾರಿಯಾಗುತ್ತದೆ. ಮಕ್ಕಳು ರಜಾದಿನಗಳ ಸಮಯವನ್ನ ಸದುಪಯೋಗ ಪಡಿಸಿಕೊಂಡು ಇನ್ನಷ್ಟು ಕ್ರಿಯಾಶೀಲರಾಗಲು ಬೇಸಿಗೆ ಶಿಬಿರಗಳು ಉತ್ತಮ ಆಯ್ಕೆ ಆಗಿರುತ್ತದೆ. ಮಕ್ಕಳಿಗೆ ಶಾಲಾ ಮಟ್ಟದಲ್ಲಿಯೇ ದುಶ್ಚಟಗಳಿಂದ ,ಕೆಟ್ಟ ಹವ್ಯಾಸಗಳಿಂದ ದೂರವಿರಿಸುವ ಅರಿವು ಕಾರ್ಯಕ್ರಮಗಳನ್ನ ಆಯೋಜಿಸಿದಾಗ ಉತ್ತಮ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ . ಇಂತಹ ಬೇಸಿಗೆ ಶಿಬಿರಗಳು ಮಕ್ಕಳು ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಹಕಾರಿ” ಎಂದು ಮಾಜಿ ಸಚಿವ ಕೆ .ಜಯ ಪ್ರಕಾಶ್ ಹೆಗ್ಡೆ ಹೇಳಿದರು. ಇವರು ಕೋಟೇಶ್ವರ ಯಡಾಡಿ -ಮತ್ಯಾಡಿ ಸುಜ್ಞಾನ ಪದವಿ ಪೂರ್ವ ಕಾಲೇಜು ಮತ್ತು ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಆಯೋಜಿಸಿದ ಬೇಸಿಗೆ ಶಿಬಿರ ‘ಮಂಥನ ‘
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಖ್ಯಾತ ಚಲನಚಿತ್ರ ನಟಿ ಸಂಗೀತ ಶೃಂಗೇರಿ ಮಾತನಾಡುತ್ತಾ “ನಾವೆಲ್ಲರೂ ದ್ವೇಷವನ್ನ ಬಿಟ್ಟು ಮನುಷ್ಯತ್ವಕ್ಕೆ ಹೆಚ್ಚು ಬೆಲೆ ಕೊಟ್ಟು ಬದುಕುವ, ಮಾನವೀಯ ಮೌಲ್ಯಗಳಿಗೆ ಹೆಚ್ಚು ಮಾನ್ಯತೆ ದೊರೆಯುವ ಸಮಾಜ ನಮ್ಮದಾಗಬೇಕು .ಮಕ್ಕಳಿಗೆ ಬಾಲ್ಯದಲ್ಲಿಯೇ ಮಾನವೀಯ ಮೌಲ್ಯಗಳನ್ನು ಕಲಿಸಲು ಬೇಸಿಗೆ ಶಿಬಿರಗಳು ಹೆಚ್ಚು ಸಹಕಾರಿಯಾಗುತ್ತದೆ. ಪ್ರತಿಯೊಬ್ಬ ಸಾಧಕ ವ್ಯಕ್ತಿಯ ಯಶಸ್ಸಿನ ಹಿಂದೆ ಅವರ ಅವಿರತ ಶ್ರಮ ಮತ್ತು ಪ್ರಯತ್ನ ಅಡಗಿರುತ್ತದೆ. ನಾವು ಸೋಲು ಮತ್ತು ಗೆಲುವುಗಳನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಿ ಯಶಸ್ಸು ಪಡೆಯಲು ಪ್ರಯತ್ನಿಸಿದರೆ ಸಾಧಕರಾಗಬಹುದು” ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಮಾತನಾಡುತ್ತಾ “ನಮ್ಮ ಸಂಸ್ಥೆ ಕಳೆದ ಮೂರು ವರ್ಷಗಳಿಂದ ಯಶಸ್ವಿಯಾಗಿ ಬೇಸಿಗೆ ಶಿಬಿರಗಳನ್ನು ಈ ಪರಿಸರದ ಸಾವಿರಾರು ಮಕ್ಕಳು ಅದರ ಪ್ರಯೋಜನವನ್ನು ಪಡೆದಿದ್ದಾರೆ. ಈ ಬೇಸಿಗೆ ಶಿಬಿರ ‘ಮಂಥನ’ದ ಮೂಲಕ ಮಕ್ಕಳಿಗೆ ವಿಶೇಷ ತರಬೇತಿಗಳನ್ನು ನೀಡಿ ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಯನ್ನು ಹೊರತರಬೇಕೆನ್ನುವುದು ನಮ್ಮ ಉದ್ದೇಶ . ಮಕ್ಕಳು ಶಿಬಿರದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಾಗ ಮಕ್ಕಳ ವ್ಯಕ್ತಿತ್ವ ವಿಕಸನ ಹೊಂದಲು ಸಾಧ್ಯವಾಗುತ್ತದೆ” ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಥಮ ದರ್ಜೆ ಗುತ್ತಿಗೆದಾರರಾದ ಶ್ರೀಯುತ ಅರುಣ್ ಕುಮಾರ್ ಹೆಗ್ಡೆ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿಗಳಾದ ಶ್ರೀಯುತ ಪ್ರತಾಪ್ ಶೆಟ್ಟಿ ಬೇಸಿಗೆ ಶಿಬಿರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು .ಬೇಸಿಗೆ ಶಿಬಿರದಲ್ಲಿ 1064 ಮಕ್ಕಳು ವಿದ್ಯಾರ್ಥಿಗಳು ಭಾಗವಹಿಸಿದರು , ಉದ್ಘಾಟನಾ ಸಮಾರಂಭದಲ್ಲಿ 2500 ಅಧಿಕ ಪೋಷಕರು ಅವರ ಮಕ್ಕಳ ಜೊತೆ ಭಾಗವಹಿಸಿದ್ದರು.

ವೈವಿಧ್ಯತೆಯಿಂದ ಕೂಡಿದ ಬೇಸಿಗೆ ಶಿಬಿರ:
ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ‘ ಮಂಥನ ‘ ಬೇಸಿಗೆ ಶಿಬಿರವು ಏಪ್ರಿಲ್ 20ರಿಂದ ಏಪ್ರಿಲ್ 26ರ ತನಕ ನಡೆಯಲಿದ್ದು ವಿವಿಧ ಕಲೆ, ಸಾಹಿತ್ಯ, ಕ್ರೀಡೆ, ನಾಟಕ, ಅಭಿನಯ ತರಬೇತಿ, ಅರ್ಚರಿ ಟ್ರೈನಿಂಗ್, ಸಾಹಸ ಆಟಗಳು ಹೀಗೆ 30ಕ್ಕೂ ಅಧಿಕ ಚಟುವಟಿಕೆಗಳ ತರಬೇತಿಯನ್ನು ಒಳಗೊಂಡಿತ್ತು. ಸುಮಾರು 50ಕ್ಕೂ ಅಧಿಕ ಕಲಾವಿದರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ. ಸಂಪೂರ್ಣ ಬೇಸಿಗೆ ಶಿಬಿರ ಉಚಿತವಾಗಿದ್ದು ಊಟ, ತಿಂಡಿ, ವಾಹನ ಸೌಲಭ್ಯ, ಅಗತ್ಯವಿರುವವರಿಗೆ ಹಾಸ್ಟೆಲ್ ಸೌಲಭ್ಯ ಎಲ್ಲವೂ ಉಚಿತವಾಗಿದ್ದು ಕರಾವಳಿ ಭಾಗದಲ್ಲೇ ಒಂದು ವಿಶೇಷ ಬೇಸಿಗೆ ಶಿಬಿರ ಎಂದು ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಖಜಾಂಚಿ ಶ್ರೀಯುತ ಭರತ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನ ಆಡಿದರು .ಕನ್ನಡ ಶಿಕ್ಷಕ ಸಂತೋಷ್ ಕಾರ್ಯಕ್ರಮ ನಿರೂಪಿಸಿ, ಸುಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಂಜನ್ ಬಿ ಶೆಟ್ಟಿ ವಂದಿಸಿದರು.