ಡೈಲಿ ವಾರ್ತೆ: 23/ಏಪ್ರಿಲ್/2025

ಕರಿಯಂಗಳ : ಖಾಸಗಿ ಬಸ್ ಚಾಲಕ-ನಿರ್ವಾಹಕರಿಗೆ ತಂಡದಿಂದ ಅವಾಚ್ಯ ನಿಂದನೆ, ಬೆದರಿಕೆ, ಪ್ರಕರಣ ದಾಖಲು

ಬಂಟ್ವಾಳ : ಬಸ್ ತಿರುಗಿಸುವ ವಿಚಾರದಲ್ಲಿ ತಗಾಗೆ ಎತ್ತಿ ತಂಡವೊಂದು ಖಾಸಗಿ ಬಸ್ಸನ್ನು ತಡೆದು ಚಾಲಕ-ನಿರ್ವಾಹಕರಿಗೆ ಅವಾಚ್ಯವಾಗಿ ಬೈದು ಜೀವಬೆದರಿಕೆ ಹಾಕಿದ ಘಟನೆ ಕರಿಯಂಗಳ ಗ್ರಾಮದ ಪಲ್ಲಿಪ್ಪಾಡಿ ಎಂಬಲ್ಲಿ ಸೋಮವಾರ ರಾತ್ರಿ ನಡೆದಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು-ಗುರುಪುರ-ಕೈಕಂಬ-ಪೊಳಲಿ ಮಾರ್ಗವಾಗಿ ಸಂಚರಿಸುವ ಖಾಸಗಿ ಬಸ್ಸಿನ ನಿರ್ವಾಹಕ, ಕಿನ್ನಿಗೋಳಿ, ಮೆನ್ನಬೆಟ್ಟು ಗ್ರಾಮದ ಉಳ್ಳಂಜೆ ನಿವಾಸಿ ಅಭಿಜಿತ್ ಶೆಟ್ಟಿ ಹಾಗೂ ಬಸ್ ಚಾಲಕ ಶರತ್ ಶೆಟ್ಟಿ ಎಂಬವರಿಗೆ ಆರೋಪಿಗಳಾದ ಉಮೇಶ ಶೆಟ್ಟಿ, ವಿಜಯ, ಕಿಶೋರ್, ಪ್ರಶಾಂತ್ ಹಾಗೂ ಇತರರ ತಂಡ ಸೇರಿಕೊಂಡು ಕರಿಯಂಗಳ ಸಮೀಪದ ಪಲ್ಲಿಪ್ಪಾಡಿ ಎಂಬಲ್ಲಿ ಬಸ್ ತಡೆದು ಅವಾಚ್ಯವಾಗಿ ಬೈದು, ಜೀವಬೆದರಿಕೆ ಒಡ್ಡಿದ್ದಾರೆ ಎಂದು ದೂರಲಾಗಿದೆ.

ಈ ಬಗ್ಗೆ ಬಸ್ ನಿರ್ವಾಹಕ ಅಭಿಜಿತ್ ಶೆಟ್ಟಿ ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ಕಳೆದ 6 ವರ್ಷಗಳಿಂದ ಸದ್ರಿ ಬಸ್ಸಿನಲ್ಲಿ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಶರತ್ ಶೆಟ್ಟಿ ಎಂಬವರು ಚಾಲಕರಾಗಿರುತ್ತಾರೆ. ಸದ್ರಿ ಬಸ್ಸು ಮಂಗಳೂರು-ಗುರುಪುರ-ಕೈಕಂಬ-ಪೊಳಲಿ ಮಾರ್ಗವಾಗಿ ಕೊಳ್ತಮಜಲುವಿಗೆ ಸಂಚರಿಸುತ್ತಿದ್ದು, ಸೋಮವಾರ ಪೊಳಲಿ ಮಾರ್ಗವಾಗಿ ಕೊಳ್ತಮಜಲುವಿಗೆ ಪ್ರಯಾಣಿಕರನ್ನು ಇಳಿಸಿಕೊಂಡು, ಹತ್ತಿಸಿಕೊಂಡು ಸಂಚರಿಸಿರುತ್ತಿರುವ ವೇಳೆ ರಾತ್ರಿ 7.40 ರ ಸುಮಾರಿಗೆ ಕರಿಯಂಗಳ ಗ್ರಾಮದ ಪಲ್ಲಿಪಾಡಿ ಎಂಬಲ್ಲಿ ಆರೋಪಿಗಳು ಬಸ್ ತಿರುಗಿಸುವ ವಿಷಯದಲ್ಲಿ ತಕರಾರು ತೆಗೆದು ಏಕಾಏಕಿ ಬಸ್ಸನ್ನು ತಡೆದು ನಿಲ್ಲಿಸಿ, ಚಾಲಕ-ನಿರ್ವಾಹಕರಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುತ್ತಾರೆ ಎಂದು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.