




ಡೈಲಿ ವಾರ್ತೆ: 29/ಏಪ್ರಿಲ್/2025


ಸಾಲಿಗ್ರಾಮ| ಜನಿವಾರಕ್ಕೆ ಕತ್ತರಿ ಪ್ರಕರಣ: ಜನಿವಾರಧಾರಿ ಸಮಾಜಗಳಿಂದ ಪ್ರತಿಭಟನೆ

ಕೋಟ: ರಾಜ್ಯದ ವಿವಿಧ ಕಡೆಗಳಲ್ಲಿ ಸಿ.ಇ.ಟಿ. ಪರೀಕ್ಷೆಗಾಗಿ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ ಘಟನೆಯ ಕುರಿತು ಎ. 29 ರಂದು ಮಂಗಳವಾರ ಸಾಲಿಗ್ರಾಮದಲ್ಲಿ ಜನಿವಾರಧಾರಿ ಸಮಾಜಗಳ ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ನೇತೃತ್ವದಲ್ಲಿ ಗೌಡ ಸಾರತ್ವತ ಬ್ರಾಹ್ಮಣ ಸಮಾಜ ಸಾಲಿಗ್ರಾಮ ವಲಯ, ಕೋಟ ವಿರಾಡ್ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘ ಸಾಲಿಗ್ರಾಮ, ಗಾಣಿಗ ಯುವ ಸಂಘಟನೆ ಕೋಟ ವಲಯದ ಸಹಯೋಗದಲ್ಲಿ ಪ್ರತಿಭಟನೆ, ಸಭೆ ನಡೆಯಿತು.


ಈ ಸಂದರ್ಭದಲ್ಲಿ ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯಾಧ್ಯಕ್ಷ ಶಿವರಾಮ ಉಡುಪ ಮಾತನಾಡಿ
ಜನಿವಾರ ಎನ್ನುವಂತದ್ದು ಷೋಡಶ ಕರ್ಮಗಳನ್ನು ಆಚರಿಸುವ ಪ್ರತಿಯೊಂದು ಸಮಾಜಗಳಿಗೆ ಅತ್ಯಂತ ಪವಿತ್ರವಾದದ್ದು. ಈ ಹಿಂದೆ ಯಾವುದೇ ಪರೀಕ್ಷೆಯಲ್ಲಿ ಇದನ್ನು ಕತ್ತರಿಸಿದ ಉದಾಹರಣೆ ಇಲ್ಲ. ಆದ್ದರಿಂದ ರಾಜ್ಯದಲ್ಲಿ ಇದೀಗ ನಡೆಯುತ್ತಿರುವ ಪ್ರಕರಣ ಜನಿವಾರ ಧರಿಸುವ ಪ್ರತಿಯೊಂದು ಸಮಾಜದ ಮನಸ್ಸಿ ಭಾವನೆಗೆ ನೋವುಂಟು ಮಾಡಿದೆ. ಜನಿವಾರ ದಾರಿ ಸಮುದಾಯಕ್ಕೆ ನ್ಯಾಯಬೇಕು ಎಂದು ಶಿವರಾಮ ಉಡುಪ ಹೇಳಿದರು.
ಕೋಟ ವಿರಾಡ್ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಮಣೂರು ಸುಬ್ರಾಯ ಆಚಾರ್ಯ ಮಾತನಾಡಿ, ಈ ಪ್ರಕರಣ ಕೇವಲ ಬ್ರಾಹ್ಮಣ ಸಮಾಜಕ್ಕೆ ಮಾತ್ರ ಆಗಿರುವ ಅಪಮಾನವಲ್ಲ. ಜನಿವಾರ ಧರಿಸುವ ಎಲ್ಲರಿಗೂ ಮಾಡಿದ ದ್ರೋಹವಾಗಿದೆ. ಈ ರೀತಿ ಘಟನೆ ಮುಂದೆ ನಡೆಯಬಾರದು ಎಂದರು.
ಗಾಣಿಯ ಯುವ ಸಂಘಟನೆ ಕೋಟ ಘಟಕದ ಅಧ್ಯಕ್ಷ ಗಿರೀಶ್ ಗಾಣಿಗ ಮಾತನಾಡಿ, ಅನ್ಯಾಯಕೊಳಗಾದ ವಿದ್ಯಾರ್ಥಿಗೆ ಆತ ಬಯಸಿದ ಕಾಲೇಜಿನಲ್ಲಿ, ಬಯಸಿದ ವಿಷಯದ ಕುರಿತು ಉಚಿತ ಶಿಕ್ಷಣಕ್ಕೆ ಸರಕಾರ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಕೂಟಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆಯ ಮಾಜಿ ಅಧ್ಯಕ್ಷ ಶ್ರೀಪತಿ ಅಧಿಕಾರಿ, ಗೌಡ ಸಾರತ್ವತ ಬ್ರಾಹ್ಮಣ ಸಮಾಜದ ಸಾಲಿಗ್ರಾಮ ವಲಯದ ವಿವೇಕ್ ಮೊದಲಾದವರು ಮಾತನಾಡಿದರು. ಮನವಿಯನ್ನು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯ ಪರವಾಗಿ ಉದಯ ನಾಯ್ಕ್ ಸ್ವೀಕರಿಸಿದರು.
ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ನಾಗರಾಜ ಗಾಣಿಗ, ಬ್ರಾಹ್ಮಣ ಸಮಾಜದ ಪ್ರಮುಖರಾದ ರಘು ಮಧ್ಯಸ್ಥ, ಮಂಜುನಾಥ ಉಪಾಧ್ಯ, ಸದಾರಾಮ ಸೋಮಯಾಜಿ, ಸುಬ್ರಹ್ಮಣ್ಯ ಹೇರ್ಳೆ, ಸುಬ್ರಾಯ ಉರಾಳ, ತಾರನಾಥ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪಹಲ್ಗಾಮ್ ಉಗ್ರರ ದಾಳಿಯಲ್ಲಿ ನಿಧನರಾದ ಭಾರತೀಯರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ಕಾರ್ಯದರ್ಶಿ ಕೆ.ರಾಜಾರಾಮ್ ಐತಾಳ್ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.