




ಡೈಲಿ ವಾರ್ತೆ: 01/MAY/2025


ಮಂಗಳೂರು| ಕುಡುಪು ಗುಂಪು ಹತ್ಯೆ ಪ್ರಕರಣ; ಕರ್ತವ್ಯ ಲೋಪ ಎಸಗಿದ ಇನ್‌ಸ್ಪೆಕ್ಟರ್ ಸಹಿತ ಮೂವರು ಪೊಲೀಸರ ಅಮಾನತು

ಮಂಗಳೂರು: ಮಂಗಳೂರು ನಗರದ ಹೊರವಲಯದ ಕುಡುಪು ಎಂಬಲ್ಲಿ ರವಿವಾರ ಎ.27ರಂದು ನಡೆದ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಶಿವಕುಮಾರ್ ಕೆ ಆರ್ ಸಹಿತ ಮೂವರನ್ನು ಅಮಾನತುಗೊಳಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಕ್ರಿಕೆಟ್ ಪಂದ್ಯಾಟವನ್ನು ವೀಕ್ಷಿಸಲು ಬಂದ ಕೇರಳದ ವಯನಾಡು ಜಿಲ್ಲೆಯ ಅಶ್ರಫ್ ಎಂಬಾತನ ಮೇಲೆ ಗುಂಪು ಹಲ್ಲೆ ನಡೆದಿತ್ತು. ಗ್ರಾಮಾಂತರ ಠಾಣೆಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಳ್ಳುವ ಬದಲು ಸಂಶಯಾಸ್ಪದ ಸಾವು ಪ್ರಕರಣ ಎಂದು ದಾಖಲಿಸಿಕೊಂಡಿದ್ದರು.
ಈ ಪ್ರಕರಣವನ್ನು ಮುಚ್ಚಿಹಾಕುವ ಯತ್ನ ನಡೆದಿತ್ತು ಎಂದು ಅನೇಕ ಸಂಘಟನೆಗಳು ಆರೋಪಿಸಿದ್ದವು.
ಆ ಬಳಿಕ ಎಚ್ಚೆತ್ತುಕೊಂಡ ಪೊಲೀಸರು 20 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಇದೀಗ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸೆಕ್ಟರ್ ಶಿವಕುಮಾರ್ ಕೆ ಆರ್, ಹೆಡ್‌ಕಾನ್‌ಸ್ಟೇಬಲ್ ಚಂದ್ರ ಪಿ. ಮತ್ತು ಪೊಲೀಸ್ ಕಾನ್‌ಸ್ಟೇಬಲ್ ಯಲ್ಲಾಲಿಂಗ ಅವರನ್ನು ಅಮಾನತುಗೊಳಿಸಲಾಗಿದೆ.