ಡೈಲಿ ವಾರ್ತೆ: 02/MAY/2025

ಉಡುಪಿ | ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತಿಯಾಗಿ ರಿಕ್ಷಾ ಚಾಲಕನ ಮೇಲೆ ತಲ್ವಾರ್ ದಾಳಿ ಯತ್ನ: ಇಬ್ಬರು ಆರೋಪಿಗಳ ಬಂಧನ

ಉಡುಪಿ: ರಿಕ್ಷಾ ಚಾಲಕರೊಬ್ಬರ ಮೇಲೆ ಇಬ್ಬರು ದುಷ್ಕರ್ಮಿಗಳು ತಲವಾರಿನಿಂದ ದಾಳಿ ಮಾಡಿ ಕೊಲೆಗೆ ಯತ್ನಿಸಿರುವ ಘಟನೆ ಉಡುಪಿಯ ಶೇಡಿಗುಡ್ಡೆ ಬಳಿ ನಡೆದಿದೆ.

ಹಿರಿಯಡ್ಕ ಬೊಮ್ಮರಬೆಟ್ಟುವಿನ ಸಂದೇಶ್ (31) ಮತ್ತು ಬಾಪೂಜಿ ದರ್ಖಾಸು ನಿವಾಸಿ ಸುಶಾಂತ್ (32) ಬಂದಿತ ಆರೋಪಿಗಳು.

ಅಬುಬಕ್ಕರ್‌(50) ಎಂಬುವವರು ಆಟೋ ರಿಕ್ಷಾದಲ್ಲಿ ಆತ್ರಾಡಿಯಿಂದ ಮದಗ ಕಡೆಗೆ ಮುಖ್ಯರಸ್ತೆಯಲ್ಲಿ ಬರುತ್ತಿರುವಾಗ ಆತ್ರಾಡಿ ಗ್ಯಾಸ್‌ ಪೆಟ್ರೋಲ್‌ ಬಂಕ್‌ ಬಳಿ ಬೈಕ್ ನಲ್ಲಿ ಬಂದ ಇಬ್ಬರು ಅವಾಚ್ಯ ಶಬ್ದಗಳಿಂದ ಬೈದಿದ್ದು, ಅಲ್ಲದೇ ಅಬುಬಕ್ಕರ್‌ ಅವರ ಆಟೋರಿಕ್ಷಾವನ್ನು ಅಡ್ಡಗಟ್ಟಿ ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಗಾಡಿಯನ್ನು ನಿಲ್ಲಿಸದೇ ಮುಂದೆ ಬಂದಾಗ, ಹಿಂಬದಿ ಕುಳಿತ ವ್ಯಕ್ತಿಯ ಕೈಯಲ್ಲಿ ತಲವಾರು ರೀತಿಯ ಆಯುದವಿದ್ದು, ಅವರಲ್ಲಿ ಒಬ್ಬ ವ್ಯಕ್ತಿ ಅಬುಬಕ್ಕರ್‌ ಅವರನ್ನು ಉದ್ದೇಶಿಸಿ “ಆಯನ್‌ ಕಡುಪು ಬುಡೊಚ್ಚಿ” ಎಂಬುದಾಗಿ ಹೇಳಿದ್ದು ಅಬುಬಕ್ಕರ್‌ ಅವರು ಶೇಡಿಗುಡ್ಡೆ ಬಳಿ ರೋಸ್‌ ಬಸ್ಸಿನವರ ಮನೆ ಬಳಿ ಇರುವ ರಸ್ತೆಯಲ್ಲಿ ಆಟೋ ರಿಕ್ಷಾವನ್ನು ನಿಲ್ಲಿಸಿ ಓಡಲು ಪ್ರತ್ನಿಸಿದಾಗ ಬೈಕ್‌ ನಲ್ಲಿದ್ದ ಒಬ್ಬ ವ್ಯಕ್ತಿಯು ತನ್ನ ಕೈಯಲ್ಲಿದ್ದ ತಲವಾರಿನಿಂದ ಅಬುಬಕ್ಕರ್‌ ಅವರ ತಲೆಗೆ ಬೀಸಿದ್ದು ಆಗ ತಲವಾರಿನ ಹೊಡೆತದಿಂದ ತಪ್ಪಿಸಿಕೊಂಡಿದ್ದು, ಇನ್ನೊಬ್ಬ ವ್ಯಕ್ತಿಯು ಯಾವುದೋ ಬಾಟಲಿಯನ್ನು ಕೈ ಯಲ್ಲಿ ಹಿಡಿದು ಆಟೋ ರಿಕ್ಷಾದ ಮುಂಬಾಗದ ಗ್ಲಾಸಿಗೆ ಹೊಡೆದಿರುತ್ತಾನೆ, ಅವರು ಕೊಲ್ಲುವ ಉದ್ದೇಶದಿಂದ ಈ ರೀತಿ ಮಾಡುತ್ತಿರುವುದನ್ನು ತಿಳಿದು ಬಂದಿದ್ದು ಅಬುಬಕ್ಕರ್‌ ಅಲ್ಲೇ ಪಕ್ಕದಲ್ಲಿದ್ದ ಕಂಪೌಂಡ್‌ ನ್ನು ಜಿಗಿದು ಓಡಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಗುರುವಾರ ರಾತ್ರಿ ದ.ಕ. ಜಿಲ್ಲೆಯ ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಈ ಕೃತ್ಯ ಎಸಗಿರುವುದಾಗಿ ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ.