ಡೈಲಿ ವಾರ್ತೆ: 03/MAY/2025

ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದ ಕುಂದಾಪುರದ ವಿದ್ಯಾರಣ್ಯ ಶಾಲೆಯ ಪ್ರಾವ್ಯ ಪಿ ಶೆಟ್ಟಿ, ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಕುಂದಾಪುರ:ಕುಂದಾಪುರದ ಸುಜ್ಞಾನ ಎಜುಕೇಷನಲ್ ಟ್ರಸ್ಟ್ ಪ್ರವರ್ತಿತ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ 107 ಮಂದಿ ವಿದ್ಯಾರ್ಥಿಗಳು ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅದ್ಭುತ ಸಾಧನೆಗೈದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ, ಅವರನ್ನು, ಅವರ ಪೋಷಕರು, ಸಂಸ್ಥೆಯ ಎಲ್ಲ ಬೋಧಕ – ಬೋಧಕೇತರ ಸಿಬಂದಿಗಳು ಸೇರಿ ಅಭಿನಂದಿಸುತ್ತೇವೆ.
ಇದು ವಿದ್ಯಾರಣ್ಯ ಸಂಸ್ಥೆಯ ಯಶಸ್ಸಿನ ಒಂದು ಮೈಲಿಗಲ್ಲು ಎಂದು ಯಡಾಡಿ ಮತ್ಯಾಡಿ ವಿದ್ಯಾರಣ್ಯ ಸಂಸ್ಥೆಯ ಅಧ್ಯಕ್ಷ ರಮೇಶ್ ಶೆಟ್ಟಿ ಹೇಳಿದರು.

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ರಲ್ಲಿ 623 ಅಂಕ ಗಳಿಸಿ ರಾಜ್ಯಕ್ಕೆ ಮೂರನೇ ಸ್ಥಾನ ಗಳಿಸಿದ ಪ್ರಾವ್ಯ ಶೆಟ್ಟಿ ಮತ್ತಿತರ ಮೂವರು ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯಲ್ಲಿ ಸನ್ಮಾನಿಸಿ ಅವರು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ತಮ್ಮ ಸಂತಸವನ್ನು ಹಂಚಿಕೊಂಡ ಅವರು, ಸಂಸ್ಥೆಯ ವಿದ್ಯಾರ್ಥಿಗಳಲ್ಲಿ 620 ಕ್ಕಿಂತ ಹೆಚ್ಚು ಅಂಕ ಗಳಿಸಿದವರು 15 ಮಂದಿ, 95% ಕ್ಕಿಂತ ಹೆಚ್ಚಿನವರು 21ಮಂದಿ, 90% ಕ್ಕಿಂತ ಮೇಲಿನವರು 45, ಹಾಗೂ 62 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಉತ್ತೀ ರ್ಣರಾಗಿದ್ದಾರೆ. ಸಂಸ್ಥೆ ಆರಂಭವಾಗಿ ಕೇವಲ ಎರಡು ವರ್ಷವಾಗಿದೆ. ಈಗಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳೆಲ್ಲರೂ ನಮ್ಮ ಸಂಸ್ಥೆಯವರಲ್ಲ. ಬೇರೆ ಬೇರೆ ಕಡೆಗಳಿಂದ ಬಂದವರು. ಅವರನ್ನು ಇಲ್ಲಿಗೆ ಸೇರಿಸಿಕೊಳ್ಳುವಾಗ ನಾವು ಯಾವುದೇ ಷರತ್ತು, ಅಂಕಗಳ ಮಿತಿ ಹಾಕಿರಲಿಲ್ಲ. ಅತ್ಯುತ್ತಮ ಮಾದರಿಯ ಶಿಕ್ಷಣ ನೀಡುವ ನಮ್ಮ ಕಾರ್ಯ ಯೋಜನೆಯೇ ವಿದ್ಯಾರ್ಥಿಗಳ ಈ ಅದ್ಭುತ ಸಾಧನೆಗೆ ಕಾರಣ.

ನಗದು ಪುರಸ್ಕಾರ: ವಿದ್ಯಾರಣ್ಯ ಸಂಸ್ಥೆಯಲ್ಲಿ ಈ ಬಾರಿ ಎಸ್ ಎಸ್ ಎಲ್ ಸಿ ಯಲ್ಲಿ 620 ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ 50 ಸಾವಿರ ರೂಪಾಯಿಗಳ ನಗದು ಪುರಸ್ಕಾರವನ್ನು ನಾವು ಘೋಷಿಸಿದ್ದೆವು. ಅಂತಹ ಸಾಧಕ ವಿದ್ಯಾರ್ಥಿಗಳೆಲ್ಲರಿಗೂ ನಾವು ಮುಂದಿನ ಎರಡು ವರ್ಷದ ಪಿ ಯು ಸಿ ಉಚಿತ ಶಿಕ್ಷಣದೊಂದಿಗೆ 50 ಸಾವಿರ ರೂ. ಬಹುಮಾನ ನೀಡುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.

ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ಸಂತಸ ಹಂಚಿಕೊಂಡು, 10 ನೇ ತರಗತಿ ಪರೀಕ್ಷೆ ಬರೆದು ಉತ್ತೀರ್ಣರಾದ 107 ವಿದ್ಯಾರ್ಥಿಗಳಲ್ಲಿ ಸುಮಾರು 80% ಮಂದಿ ಸಾಧಾರಣ ಮಟ್ಟಕ್ಕಿಂತ ಕೆಳಗಿದ್ದವರು. ನಮ್ಮ ಪ್ರವೇಶ ಪರೀಕ್ಷೆಯಲ್ಲಿ ಐದು, ಆರು ಅಂಕ ತೆಗೆದವರಿಗೂ ನಾವು ಪ್ರವೇಶ ನೀಡಿದ್ದೇವೆ. ಆದರೆ, ಶಿಸ್ತುಬದ್ಧ ಕಾರ್ಯ ಯೋಜನೆಗಳಿಂದ ಅವರೆಲ್ಲರೂ ಉತ್ತಮ ಸಾಧನೆ ಮಾಡುವಂತೆ ರೂಪಿಸಲಾಗಿದೆ. ಹಾಸ್ಟೆಲ್ ಗಳಲ್ಲಿರುವ ವಿದ್ಯಾರ್ಥಿಗಳಿಗೆ ಪ್ರತಿ ದಿನವೂ ರೆಸಿಡೆನ್ಷಿಯಲ್ ಟೀಚರ್ಸ್ ಹಾಗೂ ವಾರ್ಡನ್ ಕಲಿಕೆಗೆ ಸಹಾಯ ಮಾಡುತ್ತಿದ್ದರು. ಬೇರೆ ಸಂಸ್ಥೆಗಳಲ್ಲಿ ಪ್ರವೇಶ ಸಿಗದಿದ್ದವರಿಗೂ ನಾವಿಲ್ಲಿ ಪ್ರವೇಶ ನೀಡಿ, ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವಂತೆ ರೂಪಿಸಿದ್ದೇವೆ. ಇದು ನಮ್ಮಲ್ಲಿನ ವಿದ್ಯಾರ್ಥಿಗಳ ಭವಿಷ್ಯವನ್ನು ಬೆಳಗುವ ನಮ್ಮ ಬದ್ಧತೆಯನ್ನು ಸಾರುತ್ತದೆ ಎಂದು ಹೆಮ್ಮೆಯಿಂದ ವಿವರಿಸಿದರು. ಈ ಸಾಧನೆಗೆ ಕಾರಣರಾದ ಸಂಸ್ಥೆಯ ಎಲ್ಲ ಸಿಬಂದಿಗಳಿಗೂ ಅವರು ಕೃತಜ್ಞತೆ ಸಲ್ಲಿಸಿ, ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಸನ್ಮಾನಗೊಂಡ ನಾಲ್ವರು ವಿದ್ಯಾರ್ಥಿಗಳ ಪೋಷಕರೂ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಮಾತನಾಡಿ ತಮ್ಮ ಭವಿಷ್ಯದ ಕಲಿಕೆಯ ಬಗ್ಗೆ ವಿವರಿಸಿ, ತಮ್ಮ ಸಾಧನೆಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಸಂಸ್ಥೆಯ ಪ್ರಾಶುಪಾಲ ಪ್ರದೀಪ್, ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ ಉಪಸ್ಥಿತರಿದ್ದರು.