



ಡೈಲಿ ವಾರ್ತೆ: 07/MAY/2025


ಆಪರೇಷನ್ ಸಿಂಧೂರ್, ಪಿಒಕೆ ಉಗ್ರ ನೆಲೆಗಳ ಮೇಲೆ ಭಾರತ ಕ್ಷಿಪಣಿ ದಾಳಿ
ನವದೆಹಲಿ: ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಕೊನೆಗೂ ಭಾರತೀಯ ಸೇನೆ ಪಾಕಿಸ್ತಾನ ಪ್ರೇರಿತ ಉಗ್ರರ ನೆಲೆಗಳ ಮೇಲೆ ದಾಳಿ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ.
ಅಂದರೆ ಮೇ 7 ರ ನಸುಕಿನಲ್ಲಿ ದೇಶಾದ್ಯಂತ ಯುದ್ಧ ಸಿದ್ಧತೆ ಅಣಕು ಕವಾಯತು ನಡೆಸುವ ಬಗ್ಗೆ ಘೋಷಣೆಯಾಗಿದ್ದು, ಆ ಸಂದರ್ಭದಲ್ಲೇ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪ್ರತಿಕಾರದ ದಾಳಿ ನಡೆಸಿದೆ.
ಪಾಕಿಸ್ತಾನದ ಹಿಡಿತದಲ್ಲಿರುವ ಮೂರು ಸ್ಥಳಗಳ ಭಾರತೀಯ ಸೇನೆ ಕ್ಷಿಪಣಿಗಳ ದಾಳಿ ಮಾಡಿದೆ. ಪಾಕಿಸ್ತಾನಿ ಮಿಲಿಟರಿ ವಕ್ತಾರರು ಈ ಮಾಹಿತಿಯನ್ನು ದೃಢಪಡಿಸಿದ್ದಾರೆ.
ಈ ದಾಳಿಯಲ್ಲಿ ಇಲ್ಲಿಯವರೆಗೆ ಮೂವರು ಸಾವನ್ನಪ್ಪಿದ್ದಾರೆ ಮತ್ತು ಅನೇಕ ಭಯೋತ್ಪಾದಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮಂಗಳವಾರ ಮಧ್ಯರಾತ್ರಿಯ ನಂತರ ಮುಜಫರಾಬಾದ್ ನಗರದ ಸುತ್ತಮುತ್ತಲಿನ ಪರ್ವತಗಳ ಬಳಿ ಪಾಕಿಸ್ತಾನಿ ಆಕ್ರತಮಿತ ಕಾಶ್ಮೀರ ಪ್ರದೇಶದಲ್ಲಿ ಹಲವಾರು ದೊಡ್ಡ ಸ್ಫೋಟಗಳು ಕೇಳಿಬಂದವು ಎಂದು ಹಲವಾರು ಸ್ಥಳೀಯರು ತಿಳಿಸಿದ್ದಾರೆ. ಸ್ಫೋಟಗಳ ನಂತರ ನಗರದಲ್ಲಿ ವಿದ್ಯುತ್ ಕಡಿತಗೊಂಡಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಇದೇ ಕಾರಣಕ್ಕೆ ಮಧ್ಯರಾತ್ರಿ ಪಾಕಿಸ್ತಾನದ ಬೀದಿಗಳಲ್ಲಿ ಭಾರಿ ಜನಸಮೂಹ ಸೇರಿದೆ.
ಜೈಷ್ ಎ ಮೊಹಮ್ಮದ್, ಲಷ್ಕರ್ ನೆಲೆಗಳ ಮೇಲೆ ದಾಳಿ:
ಜೈಷ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೊಯ್ಬಾ ನೆಲೆಗಳನ್ನು ಪ್ರಮುಖವಾಗಿ ಗುರಿಯಾಗಿಸಿ ಭಾರತೀಯ ಸೇನೆ ದಾಳಿ ನಡೆಸಿದೆ. ಭಯೋತ್ಪಾದಕರ ಅನೇಕ ಅಡಗುತಾಣಗಳು ನಾಶವಾಗಿವೆ. ಪಹಲ್ಗಾಮ್ ದಾಳಿಯ ನಂತರ, ಪಾಕಿಸ್ತಾನವು ಪಿಒಕೆಯಲ್ಲಿ ತನ್ನ ಸೇನಾ ಜಮಾವಣೆ ಹೆಚ್ಚಿಸಲು ಪ್ರಾರಂಭಿಸಿತ್ತು. ದಾಳಿಯ ಭಯದಿಂದಾಗಿ, ಸುಮಾರು 1 ಸಾವಿರ ಹೋಟೆಲ್‌ಗಳು ಮತ್ತು ಮದರಸಾಗಳನ್ನು ಇಲ್ಲಿ ಮುಚ್ಚಲಾಗಿತ್ತು. ಅಜಾನ್ ಕೂಡ ಲೌಡ್ ಸ್ಪೀಕರ್ ಇಲ್ಲದೆ ಮಾಡಲಾಗುತ್ತಿತ್ತು.
ಪಾಕಿಸ್ತಾನಿ ಮಸೀದಿಗಳಿಂದ ಪ್ರಕಟಣೆ:
ಭಾರತವು ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿದ ನಂತರ ಪಾಕಿಸ್ತಾನದ ಮಸೀದಿಗಳಲ್ಲಿ ಎಚ್ಚರಿಕೆಯ ಸಂದೇಶದ ಘೋಷಣೆ ಮಾಡಲಾಗಿದೆ. ಪಾಕಿಸ್ತಾನದಾದ್ಯಂತ ಭಯದ ವಾತಾವರಣವಿದೆ. ಜನರು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳನ್ನು ತಲುಪಬೇಕು ಎಂದು ಮಸೀದಿಗಳ ಮೂಲಕ ಮನವಿ ಮಾಡಲಾಗುತ್ತಿದೆ. ಈ ಸಮಯದಲ್ಲಿ ಮನೆಗಳಲ್ಲಿ ಯಾರೂ ಇರಬಾರದು ಎಂದು ಸಲಹೆ ನೀಡಲಾಗಿದೆ.
ಆಪರೇಷನ್ ಸಿಂಧೂರ್ ಎಂದರೇನು?
ಭಾರತದ ಆಪರೇಷನ್ ಸಿಂಧೂರ್ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ನಡೆಸುತ್ತಿರುವ ಸರ್ಜಿಕಲ್ ಸ್ಟ್ರೈಕ್ ಆಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, 9 ಸ್ಥಳಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ. ಭಾರತದ ಮೇಲೆ ಭಯೋತ್ಪಾದಕ ದಾಳಿಗಳನ್ನು ಯೋಜಿಸಿ ಕಾರ್ಯಗತಗೊಳಿಸಲಾಗುತ್ತಿದ್ದ ಸ್ಥಳಗಳು ಇವುಗಳೇ ಎನ್ನಲಾಗಿದೆ.