ಡೈಲಿ ವಾರ್ತೆ: 09/MAY/2025

ಭಾರತ-ಪಾಕ್ ಗಡಿಯಲ್ಲಿ ಉದ್ವಿಗ್ನ; ಮುಂದಿನ ಐಪಿಎಲ್ ಪಂದ್ಯಗಳು ರದ್ದು!?

ಭಾರತ ಮತ್ತು ಪಾಕ್ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಗಡಿಭಾಗಗಳಲ್ಲಿ ಹೈ ಅಲರ್ಟ್ ಮಾಡಲಾಗಿದೆ. ಈಗಾಗಲೇ ಎರಡು ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತದ ದಾಳಿಯಿಂದ ತತ್ತರಿಸಿರುವ ಪಾಕ್, ಪ್ರತೀಕಾರ ತೀರಿಸಿಕೊಳ್ಳುವ ಭರದಲ್ಲಿ ನಿನ್ನೆ (ಮೇ.08) ರಾತ್ರಿ ಪಂಜಾಬ್ ಮತ್ತು ರಾಜಸ್ಥಾನ ಗಡಿಗಳಲ್ಲಿ ಕ್ಷಿಪಣಿ ಮತ್ತು ಡೋನ್ ದಾಳಿ ನಡೆಸಿತು. ಈ ಬಿಸಿ ಇದೀಗ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಗಳಿಗೂ ತಟ್ಟಿದೆ.

ನಿನ್ನೆ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ 10 ಓವರ್‌ಗೆ ಸ್ಥಗಿತಗೊಂಡಿತು. ಇದಕ್ಕೆ ಕಾರಣ ಪಾಕಿಸ್ತಾನ ನಡೆಸಿದ ದಾಳಿ. ಭದ್ರತಾ ಕಾರಣಗಳಿಂದ ನಡೆಯುತ್ತಿದ್ದ ಪಂದ್ಯವನ್ನು ಕೂಡಲೇ ಲೈಟ್ ಆಫ್ ಮಾಡುವ ಮೂಲಕ ರದ್ದುಗೊಳಿಸಲಾಯಿತು. ಕೆಲವು ಸಮಯ ಸ್ಟೇಡಿಯಂನಲ್ಲಿಯೇ ಕಾದ ಕ್ರಿಕೆಟ್ ಪ್ರಿಯರು, ಪಂದ್ಯ ಮತ್ತೆ ಶುರುವಾಗಬಹುದು ಎಂದು ನಿರೀಕ್ಷಿಸಿದರು. ಆದ್ರೆ, ಪಂದ್ಯ ಇಲ್ಲಿಗೆ ರದ್ದಾಗಲಿದ್ದು, ಮುಂದುವರಿಯುವುದಿಲ್ಲ ಎಂದು ಸ್ಪಷ್ಟನೆ ನೀಡಲಾಯಿತು.

ಎರಡು ದೇಶಗಳ ನಡುವಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಮುಂಬರುವ ಐಪಿಎಲ್ ಪಂದ್ಯಗಳನ್ನು ನಡೆಸುವುದೋ ಅಥವಾ ಬೇಡವೋ ಎಂಬ ನಿರ್ಧಾರ ಕುರಿತಂತೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮಾತನಾಡಿದ್ದಾರೆ. “ಈಗಿನ ಪರಿಸ್ಥಿತಿಯನ್ನು ಬಿಸಿಸಿಐ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ವಿಷಯದಲ್ಲಿ ಏನು ನಿರ್ಧಾರ ಕೈಗೊಳ್ಳಬೇಕು ಎಂಬುದರ ಕುರಿತು ಸರ್ಕಾರದ ಸಲಹೆಗಾಗಿ ಕಾಯುತ್ತಿದ್ದೇವೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಬದಲಾಗುತ್ತಿರುವ ಹಿನ್ನೆಲೆ ಬಿಸಿಸಿಐ ಅಂತಿಮ ನಿರ್ಧಾರ ಕೈಗೊಳ್ಳಲಿದೆ” ಎಂದು ತಿಳಿಸಿದರು.

ನಮಗೆ ಏನು ಹೇಳುತ್ತಾರೋ ಅದರಂತೆ ನಡೆದುಕೊಳ್ಳುತ್ತೇವೆ. ವಿಷಯವನ್ನು ಎಲ್ಲಾ ಫ್ರಾಂಚೈಸಿಗೂ ತಲುಪಿಸುತ್ತೇವೆ. ಸದ್ಯದ ಪರಿಸ್ಥಿತಿಯಲ್ಲಿ ನಮಗೆ ಅಭಿಮಾನಿಗಳು, ಆಟಗಾರರು ಮತ್ತು ಫ್ರಾಂಚೈಸಿಯ ಸುರಕ್ಷತೆ ಮೊದಲ ಆದ್ಯತೆ ಎಂದು ಹೇಳಿದ್ದಾರೆ. ಇನ್ನೇನು ಪ್ಲೇಆಫ್‌ಗೆ ಕೆಲವೇ ಕೆಲವು ಪಂದ್ಯಗಳು ಬಾಕಿ ಉಳಿದಿರುವಾಗ ಬಿಸಿಸಿಐ ಯಾವ ನಿರ್ಧಾರ ಕೈಗೊಳ್ಳಲಿದೆ’ ಎಂಬ ಪ್ರಶ್ನೆ ಸದ್ಯ ಹಲವರನ್ನು ಕಾಡಿದೆ.